ಯುವ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಪರಿಸರ ಅವಶ್ಯಕ

| Published : Jun 27 2024, 01:06 AM IST

ಸಾರಾಂಶ

ಕೈಗಾರಿಕಾ ಹಾಗೂ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರಿಗೆ ಅರಣ್ಯ ಇಲಾಖೆ ವತಿಯಿಂದ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಆನಂದಪುರ

ಮುಂದಿನ ಯುವ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಕಾಡಿನ ಪರಿಸರ ಅತ್ಯಂತ ಅವಶ್ಯಕ. ರೈತರು ತಮ್ಮ ಹೊಲದಲ್ಲಿ ಕಾಡನ್ನು ಕಡ್ಡಾಯವಾಗಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.

ಉಳ್ಳೂರು ಹಾಗೂ ಗೌತಮಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅರಣ್ಯ ಪಾಲಕರ ವಸತಿ ಗೃಹವನ್ನು ಉದ್ಘಾಟಿಸಿ ಮಾತನಾಡಿ, ಅರಣ್ಯ ನಾಶದಿಂದ ನಾವು ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಕಾಡು ಸಮೃದ್ಧಿಯಾಗಿದ್ದರೆ ಉತ್ತಮ ಮಳೆ ಬೆಳೆ ಕಾಣಲು ಸಾಧ್ಯ ಎಂದರು. ಕಳೆದ ವರ್ಷ ಸರಿಯಾಗಿ ಮಳೆಯಾಗದೆ ಕುಡಿಯುವ ನೀರಿಗೆ ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ರೈತರ ತೋಟಗಳು ಸಹ ನೀರಿಲ್ಲದೆ ಬಳಲುತ್ತಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಮುಂದಿನ ಯುವ ಪೀಳಿಗೆಗೆ ಉತ್ತಮ ಪರಿಸರದ ಅವಶ್ಯಕತೆ ಇದ್ದು ಪ್ರತಿಯೊಬ್ಬ ರೈತರು ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಒತ್ತುವರಿ ಮಾಡದೆ ಕಾಡನ್ನು ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಹೊಸದಾಗಿ ಯಾರಾದರೂ ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಆದರಿಂದ ರೈತರು ತಮ್ಮ ಮುಂದಿನ ಮಕ್ಕಳ ಮೊಮ್ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಡನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿಮ್ಮಿಂದಾಗಬೇಕು ಎಂದರು. ಗ್ರಾಪಂ ಪ್ರತಿನಿಧಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.