ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾದ ಸಿಎಸ್‌ಐಆರ್‌ ಪುಷ್ಪಕೃಷಿ ಮಿಷನ್ ಯೋಜನೆಯಡಿ, ರೈತರು ಹಾಗೂ ವಿದ್ಯಾರ್ಥಿಗಳಲ್ಲಿ ಪುಷ್ಪ ಕೃಷಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಹೂವಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷಿಯೊಂದಿಗೆ ಪುಷ್ಪ ಬೆಳೆಗಳ ಮಹತ್ವವನ್ನು ತಿಳಿಸಿ, ಯುವಪೀಳಿಗೆಯನ್ನು ಹೂವಿನ ಕೃಷಿಯತ್ತ ಆಕರ್ಷಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪರಿಸರ ಸಂರಕ್ಷಣೆ ಹಾಗೂ ಜೀವ ವೈವಿಧ್ಯದ ಅರಿವು ಮಕ್ಕಳಲ್ಲೇ ಬೆಳೆಸುವ ಉದ್ದೇಶದಿಂದ ತಾಲೂಕಿನ ಬೆಲವತ್ತಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಿಎಸ್‌ಐಆರ್–ಎನ್‌ಬಿಆರ್‌ಐ (ರಾಷ್ಟ್ರೀಯ ಸಸ್ಯಶಾಸ್ತ್ರೀಯ ಸಂಶೋಧನಾ ಸಂಸ್ಥೆ), ಲಕ್ನೋ ವತಿಯಿಂದ ಸುಂದರ ಹೂವಿನ ತೋಟವನ್ನು ನಿರ್ಮಿಸಿ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾದ ಸಿಎಸ್‌ಐಆರ್‌ ಪುಷ್ಪಕೃಷಿ ಮಿಷನ್ ಯೋಜನೆಯಡಿ, ರೈತರು ಹಾಗೂ ವಿದ್ಯಾರ್ಥಿಗಳಲ್ಲಿ ಪುಷ್ಪ ಕೃಷಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಹೂವಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷಿಯೊಂದಿಗೆ ಪುಷ್ಪ ಬೆಳೆಗಳ ಮಹತ್ವವನ್ನು ತಿಳಿಸಿ, ಯುವಪೀಳಿಗೆಯನ್ನು ಹೂವಿನ ಕೃಷಿಯತ್ತ ಆಕರ್ಷಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಈ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ತಾಲೂಕಿನ ಬೆಲವತ್ತಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಲಾಗಿದ್ದು, ಶಾಲಾ ಆವರಣದಲ್ಲಿ ವಿವಿಧ ಜಾತಿಯ ಹೂಗಿಡಗಳನ್ನು ನೆಟ್ಟು ಸುಂದರ ತೋಟವನ್ನು ನಿರ್ಮಿಸಲಾಗಿದೆ. ಹಸಿರು ವಾತಾವರಣ, ಕಾಂಪೌಂಡ್ ಬೇಲಿಯಿಂದ ಸಂರಕ್ಷಿತ ಕ್ಯಾಂಪಸ್ ಹಾಗೂ ಪ್ರಕೃತಿ ಸಂರಕ್ಷಣೆಯ ಬಗ್ಗೆ ಶಾಲಾ ಶಿಕ್ಷಕರು ತೋರಿದ ಕಾಳಜಿ ಸಂಸ್ಥೆಯ ಆಯ್ಕೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಯಿತು.

ಪುಷ್ಪಕೃಷಿ ಮಿಷನ್ ಯೋಜನೆಯು ಭಾರತವನ್ನು ಹೂವಿನ ಕೃಷಿಯಲ್ಲಿ ಸ್ವಾವಲಂಬಿಯಾಗಿಸುವುದರ ಜೊತೆಗೆ, ಪುಷ್ಪ ಕೃಷಿಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಹೊಸ ಬಗೆಯ ಹೂಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಶಾಲಾ ಮಕ್ಕಳಲ್ಲಿ ಪುಷ್ಪ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವುದನ್ನು ಗುರಿಯಾಗಿಸಿಕೊಂಡಿದೆ.

ಕರ್ನಾಟಕದಲ್ಲಿ ಚಿತ್ರದುರ್ಗ, ವಿಜಯನಗರ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳು ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಜಿಲ್ಲೆಗಳ ನೂರಾರು ರೈತರಿಗೆ ಚೆಂಡು ಹೂವು, ಗುಲಾಬಿ, ಮಲ್ಲಿಗೆ ಹಾಗೂ ಸುಗಂಧರಾಜ ಗಿಡಗಳನ್ನು ಉಚಿತವಾಗಿ ವಿತರಿಸಲಾಗಿದೆ. ಜೇನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ 200 ಜೇನು ಪೆಟ್ಟಿಗೆಗಳನ್ನೂ ರೈತರಿಗೆ ನೀಡಲಾಗಿದೆ.

ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆ, ಜೀವ ವೈವಿಧ್ಯ ಮತ್ತು ಪ್ರಕೃತಿಯ ಮಹತ್ವದ ಅರಿವು ಮೂಡಿಸುವುದೇ ಇಂತಹ ಹೂವಿನ ತೋಟಗಳ ಮೂಲ ಉದ್ದೇಶವಾಗಿದ್ದು, ಸಿಎಸ್‌ಐಆರ್–ಎನ್‌ಬಿಆರ್‌ಐ ಸಂಸ್ಥೆಯು ಈಗಾಗಲೇ ಕರ್ನಾಟಕದಲ್ಲಿ ಹಲವು ಶಾಲೆಗಳಲ್ಲಿ ಇಂತಹ ತೋಟಗಳನ್ನು ಸ್ಥಾಪಿಸಿದೆ. ಈ ಸಾಲಿನಲ್ಲಿ ಬೆಲವತ್ತಹಳ್ಳಿ ಶಾಲೆಯೂ ಈ ಗೌರವಕ್ಕೆ ಪಾತ್ರವಾಗಿದೆ.ಶಾಲಾ ಆವರಣದಲ್ಲಿ ನಿರ್ಮಿಸಿದ ಹೂವಿನ ತೋಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್ ಗಿಡಕ್ಕೆ ನೀರು ಹಾಯಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಸ್. ಕುಮಾರ್, ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸಂಜೀವ ನಾಯಕ, ಸಮನ್ವಯಾಧಿಕಾರಿ ಶಂಕರ್, ಸಿಇ ಚಂದ್ರೇಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಾ ಹನುಮೇಗೌಡ, ಸದಸ್ಯರಾದ ಕೋಮಲಾ ಶಿವರಾಜ್, ಸೋಮಶೇಖರ್, ಶಿವಾನಂದ ನಾಯಕ್, ಶಿಕ್ಷಕ ಹರೀಶ್, ಬೆಲವತ್ತಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಬಾಗೇಶಪುರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಪೋಷಕರು ಹಾಗೂ ಬೆಲವತ್ತಹಳ್ಳಿ ಚೀಲನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.