ಹಾನಗಲ್ಲ ಪಟ್ಟಣದ ಗುರುಭವನದಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿ, ಪರಿವರ್ತನ ಕಲಿಕಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಜಾಗತಿಕ ತಾಪಮಾನ ಹಾಗೂ ಶಿಕ್ಷಣ ಕಾರ್ಯಕ್ರಮ ನಡೆಯಿತು.
ಹಾನಗಲ್ಲ: ಮಾನವನ ಉಸಿರು ಉಳಿಯಬೇಕಾದರೆ ಪರಿಸರ ಹಸಿರಾಗಿರಬೇಕು, ಹೊಗೆರಹಿತ ಜೀವನಕ್ಕೆ ಮುಂದಾಗಬೇಕಲ್ಲದೆ ಇದರಲ್ಲಿ ಪ್ರತಿ ಪ್ರಜೆಯ ಜವಾಬ್ದಾರಿಯೂ ಅತಿ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.
ಇಲ್ಲಿಯ ಗುರುಭವನದಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿ, ಪರಿವರ್ತನ ಕಲಿಕಾ ಕೇಂದ್ರ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಜಾಗತಿಕ ತಾಪಮಾನ ಹಾಗೂ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಳೆಗಾಗಿ ಇಂದೇ ಯೋಜನೆ-ಯೋಚನೆ ಮಾಡಿ, ಜೀವನ ನಿರ್ವಹಣೆ ಮಾಡುವ ಅಗತ್ಯವಿದೆ. ಎಲ್ಲ ಕಾಲಕ್ಕೂ ಸಲ್ಲುವ ಪರಿಸರ ಪ್ರಜ್ಞೆ ಬೇಕು. ಭವಿಷ್ಯದ ಅರಿವಿಲ್ಲದೆ ಕಾಡು ಕಡಿದು, ವಾತಾವರಣ ಕಲುಷಿತಗೊಳಿಸಿದರೆ ನಾಳೆ ನಾವೇ ಪಶ್ಚಾತ್ತಾಪಡುವ ಅನಿವಾರ್ಯತೆ ಇದೆ ಎಂದರು.ಸಾಹಿತಿ ಡಾ. ಎಂ. ಪ್ರಸನ್ನಕುಮಾರ ಮಾತನಾಡಿ, ನಾವು ಬದುಕಲು ನಮ್ಮ ಪರಿಸರ ಉಳಿಬೇಕು. ಪರಿಸರದ ಅಸಮತೋಲನದಿಂದಾಗಿಯೇ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಚಂಡಮಾರುತಗಳಂತಹ ವಿಕೋಪಗಳಿಗೆ ತುತ್ತಾಗುತ್ತಿದ್ದೇವೆ. ಪರಿಸರವನ್ನು ತಿಳಿದು ತಿಳಿಯದೆಯೋ ಹಾಳು ಮಾಡಿ ಮಾನವ ಕುಲ ಸಾವಿನ ಕಡೆಗೆ ಮುಖ ಮಾಡುತ್ತಿದೆ. ಈಗಲಾದರೂ ಎಚ್ಚರಗೊಳ್ಳದಿದ್ದರೆ ಇಡೀ ಮಾನವ ಕುಲವೇ ನಾಶವಾಗುವ ಎಲ್ಲ ಲಕ್ಷಣಗಳು ನಮ್ಮ ಮುಂದಿವೆ. ಅರಣ್ಯ ನಾಶ, ಒತ್ತುವರಿ, ಕಾಂಕ್ರೀಟ್ ಕಾಡು ಕಟ್ಟುತ್ತಿರುವ ಭಯಾನಕ ಸಂಗತಿಗಳು ಭವಿಷ್ಯದ ಅರಿವಿಲ್ಲದೆ ನಡೆಯುತ್ತಿವೆ. ನಾವು ಉಳಿಯಲು ಪರಿಸರ ಉಳಿಸೋಣ ಎಂದರು.
ಆಶಯ ನುಡಿ ನುಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಬದಲಾದ ಕಾಲಕ್ಕೆ ಕಾಡು-ಮೇಡುಗಳನ್ನು ಹಾಳು ಮಾಡುವ ಮನೋಸ್ಥಿತಿಯಿಂದ ಹೊರಬರುವ ಅನಿವಾರ್ಯತೆ ಈಗ ನಮಗಿದೆ. ಇಡಿ ಮಾನವ ಕುಲದ ಒಳಿತಿನಲ್ಲಿ ನನ್ನ ಪಾಲು ಇದೆ ಎಂಬ ಎಚ್ಚರಿಕೆ ಬೇಕು. ಮಕ್ಕಳಿಗೆ ಈಗಲೇ ಪರಿಸರದ ಅಗತ್ಯ, ಕಾಪಾಡುವ ಅನಿವಾರ್ಯತೆಯ ಪರಿಚಯ ಆಗಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಭಾರತ ಜ್ಞಾನವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ವಿ. ಹೊಸಮನೆ ಶಾಲೆ ಕಾಲೇಜುಗಳಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಈಗ ಪ್ರಕೃತಿಯ ಪೋಷಣೆಗೆ ಘೋಷಣೆ ಮೊಳಗಬೇಕು. ನೀರು ಭೂಮಿ ಪರಿಸರ ಉಳಿಸುವ ಕಾಳಜಿ ಕಾರ್ಯರೂಪಕ್ಕೆ ಬರಬೇಕು. ಪರಿಸರ ಸಂರಕ್ಷಣೆ ಮುಖ್ಯ ಶಿಕ್ಷಣವಾಗುವ ತೀರ ಅಗತ್ಯವಿದೆ ಎಂದರು.
ಶಿಕ್ಷಣ ಸಂಯೋಜಕ ಬಿ.ಎನ್. ಸಂಗೂರ, ಭಾರತ ಜ್ಞಾನವಿಜ್ಞಾನ ಸಮಿತಿ ರಾಜ್ಯ ಸಂಚಾಲಕಿ ರೇಣುಕಾ ಗುಡಿಮನಿ, ಶಿಕ್ಷಕ ಪ್ರದೀಪಕುಮಾರ, ಎಂ.ಎಂ. ಹೋತನಹಳ್ಳಿ, ಮಹೇಶ ಹನಕೇರಿ, ರಮೇಶ ಗೂರನವರ, ಎಸ್.ಎಫ್. ಕಠಾರಿ, ಎಚ್. ಸುಧಾ, ಜ್ಯೋತಿ ಸುರಳೇಶ್ವರ, ಮಧುಮತಿ ಅಪ್ಪಣ್ಣನವರ ಪಾಲ್ಗೊಂಡಿದ್ದರು.