ಸಾರಾಂಶ
ಕಂಪನಿಯ ವತಿಯಿಂದ 100 ಸಸಿಗಳನ್ನು ಉಚಿತವಾಗಿ ನೀಡಿರುವುದಕ್ಕೆ ಸಂತಸವಾಗುತ್ತಿದೆ. ಶಾಲೆಯ ಸುತ್ತಲೂ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುತ್ತೇವೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಪರಿಸರ ಸಂರಕ್ಷಣೆ ಎಲ್ಲರಿಗೂ ನಿತ್ಯದ ಚಟುವಟಿಕೆಯಾಗಬೇಕಿದ್ದು ಪ್ರಮುಖವಾಗಿ ಸಾರ್ವಜನಿಕರು ಸೇರಿ ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ಮೈಕ್ರೋಮ್ಯಾಟಿಕ್ ಗ್ರೈಂಡಿಂಗ್ ಟೆಕ್ನಾಲಜಿ ಕಂಪನಿ ಸಿಇಒ ಟಿ.ಜಿ. ದೀನಬಂಧು ತಿಳಿಸಿದರು.ಹೊನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದ ಪ್ರಯುಕ್ತ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಯ ಮುಖ್ಯಶಿಕ್ಷಕ ಪುಟ್ಟರುದ್ರಾರಾಧ್ಯ ಮಾತನಾಡಿ, ಕಂಪನಿಯ ವತಿಯಿಂದ 100 ಸಸಿಗಳನ್ನು ಉಚಿತವಾಗಿ ನೀಡಿರುವುದಕ್ಕೆ ಸಂತಸವಾಗುತ್ತಿದೆ. ಶಾಲೆಯ ಸುತ್ತಲೂ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುತ್ತೇವೆ ಎಂದರು.ಕಂಪನಿಯ ಸಹಾಯಕ ಉಪಾಧ್ಯಕ್ಷ ಮಹೇಶ್ ಕುಮಾರ್ ಸಮಾರಿಯಾ ಮಾತನಾಡಿ, ಹೆಚ್ಚುತ್ತಿರುವ ಪ್ರಾಕೃತಿಕ ಅಸಮತೋಲನ ನಿವಾರಣೆಗಾಗಿ ಕಡ್ಡಾಯವಾಗಿ ಮರ- ಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಏಕೈಕ ಮಾರ್ಗವಾಗಿದೆ ಎಂದರು.
ಕಂಪನಿಯ ಜನರಲ್ ಮ್ಯಾನೇಜರ್ ಪ್ರವೀಣ್ ಗಣಚಾರಿ, ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಮಂಜುನಾಥ್, ಗ್ರಂಥಪಾಲಕಿ ಶಾರದಮ್ಮ ಸೇರಿ ಕಂಪನಿಯ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.