ಮನುಷ್ಯ ಸ್ವಾರ್ಥಕ್ಕಾಗಿ ಪರಿಸರ ನಾಶ ಅಪಾಯಕಾರಿ

| Published : Jul 21 2024, 01:20 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ ಮತ್ತು ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನ (ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರ ಪ್ರದರ್ಶನ) ದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ ಮತ್ತು ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನ (ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರ ಪ್ರದರ್ಶನ) ದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ನದಿಗಳಿಗೆ ತಾಯಿಯ ಸ್ಥಾನ ಕೊಟ್ಟಿರುವ ಹಾಗೂ ಪೂಜಿಸಬೇಕಾದ ಜನ ಇಂದು ಆ ನೀರನ್ನು ಕಲುಷಿತಗೊಳಿಸಿ ಹಾಳುಮಾಡುತ್ತಿದ್ದಾರೆ. ಅಧಿಕಾರದ ಆಸೆಗೆ ಮುಂದಿನ ಪೀಳಿಗೆಗೆ ಜೋಪಾನ ಮಾಡಬೇಕಿದ್ದ ಪರಿಸರವನ್ನು ಹಣ ಮತ್ತು ಅಧಿಕಾರದ ಆಸೆಗೆ ಬಲಿಕೊಡಲಾಗುತ್ತಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತದ್ದರಿಂದ ಪರಿಸರ ಹಾಗೂ ಮಾನವನ ಮಧ್ಯೆ ಏರ್ಪಟ್ಟಿರುವ ಕಂದಕವನ್ನು ವಿವರಿಸಿದರು.

ಸರಹು ಅಭಿಯಾನವು ಇಂದು ಬಿತ್ತುತ್ತಿರುವ ಬೀಜವಾಗಿದ್ದು, ಇದರ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ. ಈ ಅಭಿಯಾನವನ್ನು ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿ ಅರಿವನ್ನು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತ ಬಾಲನಟ ಕೆ.ಮನೋಹರ್ ಮಾತನಾಡಿ, ಎಲ್ಲಾ ನಾಗರಿಕತೆಗಳ ಉಗಮ ಸ್ಥಾನ ನದಿ ಮೂಲಗಳು. ಆ ನದಿ ಮೂಲಗಳು ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರದು ಆಗಿರಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಅರ್ಕಾವತಿ ನದಿ ಕುರಿತಂತೆ ಒಂದು ಸಾಕ್ಷ್ಯಚಿತ್ರ ತಯಾರಿಸಿ ಕೊಡುವ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವಸಂಚಲನ ಅಧ್ಯಕ್ಷ ಚಿದಾನಂದ್, ನದಿ, ಕೆರೆಗಳು ತುಂಬುವುದಿಲ್ಲ ಅನ್ನುವ ಆಶಯವನ್ನು ಹಿಂದಿನ ಎರಡು ವರ್ಷದ ಮಳೆಯೂ ಸುಳ್ಳಾಗಿಸಿದೆ ಅರ್ಕಾವತಿ ನದಿ ಮತ್ತೆ ಹರಿಯುವ ಭರವಸೆಯನ್ನು ಮೂಡಿಸಿದೆ. ಯುವಜನೆತೆಯೂ ಕೆರೆ, ನದಿಗಳ ಸಂರಕ್ಷಣೆಯ ಅರಿವನ್ನು ಹೊಂದಿರಬೇಕಿರುವುದು ಇಂದಿಗೆ ಅತೀ ಅವಶ್ಯಕ ಹಾಗಾಗಿ ಈ ಅಭಿಯಾನವೂ ನಮ್ಮ ಕೆರೆ ನದಿಗಳನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯೊಂದಿಗೆ ತಾಲೂಕಿನ ಎಲ್ಲಾ ಕಾಲೇಜುಗಳನ್ನು ತಲುಪಲಿದೆ ಎಂದರು.

ವೈದ್ಯೆ ಡಾ. ಇಂದಿರಾ, ಸೂರ್ಯ ಎಜುಕೇಶನ್‌ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿದರು. ಪ್ರಾಂಶುಪಾಲರಾದ ಎಂ.ಸಿ.ಮಂಜುನಾಥ್, ರಾಜಣ್ಣ ಏಕಾಶಿಪುರ, ವೆಂಕಟೇಶ್ ನಾಗದಳ, ಯುವ ಸಂಚಲನ ತಂಡದ ಸದಸ್ಯರಾದ ನವೀನ್, ಗಿರೀಶ್, ದಿವಾಕರ್, ಸರಸ್ವತಿ ಉಪಸ್ಥಿತರಿದ್ದರು.

ಫೋಟೋ-

20ಕೆಡಿಬಿಪಿ2- ದೊಡ್ಡಬಳ್ಳಾಪುರದ ಯುವ ಸಂಚಲನ, ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನಕ್ಕೆ ಚಾಲನೆ ನೀಡಲಾಯಿತು.