ಪರಿಸರ ಸಂರಕ್ಷಣೆ, ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿ

| Published : Apr 08 2024, 01:03 AM IST

ಪರಿಸರ ಸಂರಕ್ಷಣೆ, ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸ್ಟಿಕ್ ಮರುಬಳಕೆ ಹೆಚ್ಚು ಮಾರಕವಾಗಿದೆ. ಅದರ ವಿಷಕಾರಿ ಅಂಶಗಳಿಂದ ಪರಿಸರ ಮತ್ತು ಜೀವಸಂಕುಲದ ಮೇಲೆ ವೈಪರೀತ್ಯ ಪರಿಣಾಮ ಬೀರುತ್ತಿದ್ದು ಆರೋಗ್ಯಕರ ಸಮಾಜಕ್ಕೆ ಇದು ಒಳ್ಳೆಯದಲ್ಲ. ಆದರಿಂದ ಯುವ ಜನಾಂಗಕ್ಕೆ ಪರಿಸರ ಕುರಿತು ವೈಜ್ಞಾನಿಕ ಶಿಕ್ಷಣ ನೀಡಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜನರು ಹೆಚ್ಚಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಪೆಟ್ರೋಲಿಯಂನ ಉತ್ಪನ್ನವಾಗಿದೆ. ಪ್ಲಾಸ್ಟಿಕ್ ಮರುಬಳಕೆ ಹೆಚ್ಚು ಮಾರಕವಾಗಿದೆ. ಅದರ ವಿಷಕಾರಿ ಅಂಶಗಳಿಂದ ಪರಿಸರ ಮತ್ತು ಜೀವಸಂಕುಲದ ಮೇಲೆ ವೈಪರೀತ್ಯ ಪರಿಣಾಮ ಬೀರುತ್ತಿದ್ದು ಆರೋಗ್ಯಕರ ಸಮಾಜಕ್ಕೆ ಇದು ಒಳ್ಳೆಯದಲ್ಲ. ಆದರಿಂದ ಯುವ ಜನಾಂಗಕ್ಕೆ ಪರಿಸರ ಕುರಿತು ವೈಜ್ಞಾನಿಕ ಶಿಕ್ಷಣ ನೀಡಬೇಕು. ಪರಿಸರ ಸಂರಕ್ಷಣೆ ಮತ್ತು ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಖಾಜಾ ಬಂದಾನವಾಝ್ ವಿಶ್ವವಿದ್ಯಾಲಯದ ವಿಜ್ಞಾನ, ಕಲಾ, ಮಾನವಿಕ ವಿಷಯಗಳು, ಭಾಷೆಗಳು ಸಾಮಾಜಿಕ ವಿಜ್ಞಾನ, ಶಿಕ್ಷಣ, ಕಾನೂನು ಮತ್ತು ವಾಣಿಜ್ಯ ನಿಕಾಯದ ಡೀನ್ ಡಾ. ನಿಷತ್ ಆರೀಫ್ ಹುಸೈನಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ ಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವಜಲ ದಿನ, ವಿಶ್ವ ಗುಬ್ಬಚ್ಚಿಗಳ ದಿನ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಯಚೂರು ಕೃಷಿ ಮಹಾವಿದ್ಯಾಲಯದ ಮಣ್ಣು ಮತ್ತು ನೀರು ಪರೀಕ್ಷಾ ನಿರ್ವಹಣಾ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಮಲ್ಲಿಕಾರ್ಜುನ್ ರೆಡ್ಡಿ ಮಾತನಾಡಿ ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುತ್ತದೆ. ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲಿನ್ಯ, ನೀರಿನ ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು ಮತ್ತು ಪ್ರೇರೇಪಿಸುವುದು ಈ ದಿನ ಉದ್ದೇಶವಾಗಿದೆ. ನೀರನ್ನು ಸಮರ್ಪಕ ಬಳಕೆಯನ್ನು ನಿರ್ವಹಿಸುವುದು ಬಹಳ ಮುಖ್ಯ. ಇಂದಿನ ದಿನಗಳಲ್ಲಿ 700 ರಿಂದ 800 ಮಿ.ಮೀ. ಮಳೆಯಾಗುತ್ತದೆ. ಬೋರ್‍ವೆಲ್ ರೀಚಾರ್ಜ್‍ಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಬೋರ್ವೆಲ್‍ಗಳ ಮರುಪೂರ್ಣಗೊಳಿಸಿ ವರ್ಷವಿಡಿ ಕೊಳೆವೆ ಬಾವಿಗಳಲ್ಲಿ ನೀರು ಶೇಖರಣೆಗೊಳ್ಳುತ್ತದೆ. ಬೇಸಿಗೆ ಕಾಲದಲ್ಲಿಯೂ ಸಹ ನೀರು ಬತ್ತುವುದಿಲ್ಲ ಎಂದರು.

ಗುವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ನಾವು ಕೇಳಿಲ್ಲ. ಈಗ ಕಲಬುರಗಿಯಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಆಧುನೀಕರಣದ ಹೆಸರಿನಲ್ಲಿ ಮಾನವ ನಿರ್ಮಿತ ಚಟುವಟಿಕೆಗಳಿಂದ ಪರಿಸರ ಹಾಳಾಗುತ್ತಿದೆ. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯಬೇಕು. ಮುಖ್ಯವಾಗಿ ಪರಿಸರ ಸಂರಕ್ಷಣೆ ಮತ್ತು ಪೋಷಣೆ ಎಲ್ಲರ ಹೊಣೆಯಾಗಬೇಕು. ಮಹಿಳೆಯರನ್ನು ಪ್ರಕೃತಿ ಮಾತೆಗೆ ಹೋಲಿಕೆ ಮಾಡಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಕೆ. ವಿಜಯಕುಮಾರ್ ಮಾತನಾದರು. ವಿಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯೆ ಡಾ. ಸಿ. ಸುಲೋಚನಾ, ಕಲಾ ನಿಕಾಯದ ಡೀನ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಅಬ್ದುಲ್ ರಬ್ ಉಸ್ತಾದ್ ಮಾತನಾಡಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಸಿದ್ದಪ್ಪ, ಶ್ರೀಮತಿ ಅನಿತಾ ವಿಜಯಕುಮಾರ್, ಎಸ್ ಬಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರಾಂಶುಪಾಲರಾದ ಪ್ರೊ. ರಾಮಕೃಷ್ಣ ರೆಡ್ಡಿ, ಪತ್ರಿಕೋದ್ಯಮ ವಿಭಾಗದ ಡಾ. ಕೆ.ಎಂ. ಕುಮಾರಸ್ವಾಮಿ, ಮಲ್ಟಿ ಮೀಡಿಯಾ ಸಿಬ್ಬಂದಿ ಶರಣು ನಾವಿ, ಕೆಬಿಎನ್ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.