ಪರಿಸರ ಸಂರಕ್ಷಣೆ: ಸಕಲ ಜೀವರಾಶಿಗೆ ಅನುಕೂಲ

| Published : Jun 06 2024, 12:31 AM IST

ಸಾರಾಂಶ

ಹನೂರು ಮಾದೇಶ್ವರ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ರಘು, ಸಿಬ್ಬಂದಿ ವರ್ಗದವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಪ್ರಕೃತಿ ಮಾತೆ ನಮ್ಮ ನಿಮ್ಮೆಲ್ಲರನ್ನು ಆರೋಗ್ಯದಿಂದ ಇಡುವುದರಿಂದ ಪರಿಸರ ಸಂರಕ್ಷಣೆ ಮಾಡಿದರೆ ಸಕಲ ಜೀವರಾಶಿಗಳಿಗೂ ಅನುಕೂಲದಾಯಕವಾಗಲಿದೆ. ಹೀಗಾಗಿ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ಉಳಿಸಬೇಕು ಎಂದು ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿವರ್ಷ ಹವಾಮಾನ ಬದಲಾವಣೆಯಿಂದ ಜಾಗತಿಕ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಪರಿಸರ ಉತ್ತಮಗೊಳಿಸಲು ಪ್ರತಿ ವರ್ಷ ಜೂ.5ರಂದು ವಿಶ್ವ ಪರಿಸರ ದಿನಾಚರಣೆ ದೇಶಾದ್ಯಂತ ಆಚರಿಸಲಾಗುತ್ತಿದೆ. ಅರಣ್ಯ ನಾಶದಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಿಂದಾಗಿ ತಾಪಮಾನ ಹೆಚ್ಚಾಗಿ ಜನತೆ ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಲು ಪ್ರತಿಯೊಬ್ಬರು ತಮ್ಮ ನೆರೆಹೊರೆಯ ಜಮೀನು ಗ್ರಾಮದ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ನಡೆಯುತ್ತಿರುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ಜಾಗತಿಕ ತಾಪಮಾನ ಕಡಿಮೆ ಮಾಡಲು ಇಡೀ ವರ್ಷವೆಲ್ಲ ಪರಿಸರದ ಬಗ್ಗೆ ಎಲ್ಲರೂ ಎಚ್ಚೆತ್ತು ಪ್ರಕೃತಿ ಮಾತೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, ಮಾನವನ ದುರಾಸೆಯಿಂದ ಅರಣ್ಯ ಪ್ರದೇಶವನ್ನು ಕಡಿದು ನಾಶಪಡಿಸುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ರವೀಂದ್ರ ಸರಗೂರು ಮಹದೇವಸ್ವಾಮಿ, ಮಾದೇವ್ ಸ್ವಾಮಿ, ಮಾದೇವ್ ಶಾಸ್ತ್ರಿ ಉಪಸ್ಥಿತರಿದ್ದರು.