ಬಾಗಲಕೋಟೆ ತಾಲೂಕಿನ ಹಳೇ ಮಲ್ಲಾಪುರ ಗ್ರಾಮದಲ್ಲಿರುವ ಮಲ್ಲಯ್ಯನ ಗುಡ್ಡದಲ್ಲಿ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಬುಧವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಾಲೂಕಿನ ಹಳೇ ಮಲ್ಲಾಪುರ ಗ್ರಾಮದಲ್ಲಿರುವ ಮಲ್ಲಯ್ಯನ ಗುಡ್ಡದಲ್ಲಿ 2 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಬುಧವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ ಹಾಗೂ ನಾಗರಾಳ-ನಾಯನೇಗಲಿ ಇಐಡಿ ಪ್ಯಾರಿ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಮಲ್ಲಯ್ಯನ ಗುಡ್ಡದಲ್ಲಿ ವಿವಿಧ ಜಾತಿಯ ಒಟ್ಟು 2 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗುಡ್ಡದ ಪ್ರದೇಶಗಳಲ್ಲಿ ಸಸಿ ನೆಡುವುದರಿಂದ ಮಣ್ಣು ಕೊಚ್ಚುವಿಕೆ ತಡೆಯಬಹುದಾಗಿದೆ. ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಹವಾಮಾನ ಸಮತೋಲನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಹಸಿರು ಪರಿಸರ ನಿರ್ಮಾಣದತ್ತ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯಲ್ಲಿರುವ ಪ್ರತಿಯೊಂದ ಶುಗರ್ಸ್ ಕಾರ್ಖಾನೆಗಳ ಸಿಎಸ್ಆರ್ ಅನುದಾನಡಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಗಿಡ, ಮರಗಳನ್ನು ಬೆಳೆಸಲು ಎಲ್ಲ ಕಾರ್ಖಾನೆಗಳಿಗೆ ತಿಳಿಸಲಾಗಿತ್ತು. ಅದರಂತೆ ನಾಗರಾಳ-ನಾಯನೇಗಲಿ ಇಐಡಿ ಪ್ಯಾರಿ ಶುಗರ್ಸ್ ಇಂಡಿಯಾದವರು ಬಾಗಲಕೋಟೆ ತಾಲೂಕಿನ ಮಲ್ಲಯ್ಯನ ಗುಡ್ಡದಲ್ಲಿ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆ ಹಾಗೂ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮೆಲ್ಬ್ರೋ ಶುಗರ್ಸ್‌ ನವರಿಗೆ ಮುಚಖಂಡಿ ಕೆರೆ ಆವರಣ, ಬಾಡಗಂಡಿಯಲ್ಲಿರುವ ಬೀಳಗಿ ಶುಗರ್ಸ್‌ನವರಿಗೆ ಬಾಡಗಂಡಿ ಮತ್ತು ಚಿಕ್ಕಸಂಗಮ, ಜೆಮ್ಸ್ ಶುಗರ್ಸ್‌ನವರಿಗೆ ಸುನಗ ಮತ್ತು ವಾರಿ ಮಲ್ಲಯ್ಯನಗುಡ್ಡ, ಬಾದಾಮಿ ಶುಗರ್ಸ್‌ ಬಾದಾಮಿ ಗುಹೆಯ ಹತ್ತಿರ, ಕೇದಾರನಾಥ ಶುಗರ್ಸ್‌ ಲಿಂಗಾಪುರದಲ್ಲಿ ಸಸಿ ನೆಡಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.

ಕೇನ್ ಫವರ್ ಲಿಮಿಟೆಡ್‌ ಕುಳಗೇರಿ ಕ್ರಾಸ್, ನಿರಾಣಿ ಶುಗರ್ಸ್‌ ಮುಧೋಳ, ಇಂಡಿಯನ್ ಕೇನ್ ಪಾವರ್‌ ಉತ್ತೂರು, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುದ್ದಾಪುರ, ಜಮಖಂಡಿ ಶುಗರ್ಸ್‌ ಸಾವಳಗಿ, ಖಾಜಿಬೀಳಗಿ, ಪ್ರಭುಲಿಂಗೇಶ್ವರ ಶುಗರ್ಸ್ ಸಿದ್ಸ್ಪುಪೂರ, ಕುಳಲಿ, ಗೋದಾವರಿ ಶುಗರ್ಸ್‌ ತೇರದಾಳ ಮತ್ತು ಬೆಳಗಲಿ ಗುಡ್ಡ ಹಾಗೂ ಸಾಯಿಪ್ರೀಯಾ ಶುಗರ್ಸ್‌ ಮರೆಗುಡ್ಡಿ ಗ್ರಾಮದಲ್ಲಿ ಸಸಿಗಳನ್ನು ನೆಡಲಿದ್ದಾರೆಂದು ತಿಳಿಸಿದರು.

ಈ ವೇಳೆ ಮಾತನಾಡಿದ ಜಿಪಂ ಸಿಇಒ ಅವರು ಮಲ್ಲಯ್ಯನ ಗುಡ್ಡದ ಹತ್ತಿರ ಆಲಮಟ್ಟಿ ಹಿನ್ನೀರು ಇರುವುದರಿಂದ ಸುಂದರವಾದ ಗಾರ್ಡನ್ ಮಾಡಲು ಅವಕಾಶವಿದೆ. ಈ ಗುಡ್ಡದಲ್ಲಿ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಸುತ್ತಲೂ ಪರಿಸರ ಬೆಳೆಸಿ, ಹಸರೀಕರಣಕ್ಕಾಗಿ ಕ್ರಮಕೈಗೊಂಡರೆ ಸುಂದರವಾದ ವಾತಾವರಣ ಸೃಷ್ಠಿಯಾಗುತ್ತದೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ಮಲ್ಲಯ್ಯನ ಗುಡ್ಡದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ದರ್ಶನ ಒಡೆಯಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರೂಪಾ ಡಿ, ಎಐಡಿ ಪ್ಯಾರಿ ಇಂಡಿಯಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸುತ್ತಮುತ್ತಲಿನ ಗ್ರಾಮ, ನಗರದ ಪ್ರಮುಖರಾದ ಮಲ್ಲಿಕಾರ್ಜುನ ಮೇಟಿ, ಶ್ರೀನಿವಾಸ ಬಳ್ಳಾರಿ, ನಾಗರಾಜ ಹದ್ಲಿ, ಡಾ.ಶೇಖರ ಮಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.