ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪರಿಸರ ನಮಗೆ ಆಹಾರ, ಆಶ್ರಯ ಮತ್ತು ಸಂಪನ್ಮೂಲಗಳಂತಹ ಅಗತ್ಯ ಒದಗಿಸುತ್ತದೆ. ಆರೋಗ್ಯಕರ ಮತ್ತು ಸುಸ್ಥಿರ ಗ್ರಹವನ್ನು ಕಾಪಾಡಿಕೊಳ್ಳಲು ಪರಿಸರ ರಕ್ಷಿಸುವುದು ಮತ್ತು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಶಿಧರ ಗೌಡ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಿಸರ ಜೀವಂತ, ನಿರ್ಜೀವ ಎಲ್ಲವನ್ನು ಒಳಗೊಳ್ಳುತ್ತದೆ. ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಎಲ್ಲ ಜೀವಿಗಳ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳಿವೆ. ಇದರಲ್ಲಿ ಗಾಳಿ, ನೀರು, ಭೂಮಿ, ಸಸ್ಯ, ಪ್ರಾಣಿ, ಮಾನವ ನಿರ್ಮಿತ ಅಂಶಗಳು ಸೇರಿವೆ. ನಾವು ಯಾವುದೇ ಕಾರಣಕ್ಕೂ ಪರಿಸರವನ್ನು ನಾಶ, ಹಾಳು ಮಾಡದಂತೆ ಬಹು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಪರಿಸರ ಸಂರಕ್ಷಣೆ ಕೇವಲ ಪರಿಸರ ದಿನಾಚರಣೆ ದಿನದಂದು ಮಾತ್ರ ಸೀಮಿತಗೊಳಿಸದೇ ಇದು ನಿರಂತರವಾಗಿ ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಪರಿಸರಕ್ಕೆ ಸಂಬಂಧಿಸಿದಂತೆ ದೊಡ್ಡ ಅಂತಾರಾಷ್ಟ್ರೀಯ ದಿನವಾಗಿದೆ. ಪರಿಸರ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವುದು. ಮಾಲಿನ್ಯದ ವಿರುದ್ಧ ಹೋರಾಡುವುದು. ಭವಿಷ್ಯದ ಹಸಿರ ಪ್ರಕೃತಿ ಸುಸ್ಥಿರಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಜೂ.೫ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಶಪಥ ಇಂದು ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪುರಸಭೆಯಿಂದ ವಿವಿಧ ಮಾದರಿಯಲ್ಲಿ ಪರಿಸರಕ್ಕೆ ಹಾನಿಯಾಗದೇ ಇರುವ ರೀತಿಯಲ್ಲಿ ಕಸ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮಲ್ಲಿ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನಾಯ್ಯಾಧೀಶೆ ಮಂಜುಳಾ ಡಿ., ಹಿರಿಯ ವಕೀಲ ಬಿ.ಆರ್‌. ಅಡ್ಡೋಡಗಿ, ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಜಾಧವ ಮಾತನಾಡಿದರು.


1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ, ಸಿವ್ಹಿಲ್ ನ್ಯಾಯಾಧೀಶ ಅಮಿತ ಘಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕ ಬಾಲಚಂದ್ರ ಪೂಜಾರಿ, ಅರಣ್ಯ ಇಲಾಖೆ ಸಿಬ್ಬಂದಿ ಇತರರು ಇದ್ದರು. ವಕೀಲ ಶಿಲ್ಪಾ ಮುಚಖಂಡಿ ಸ್ವಾಗತಿಸಿ,ನಿರೂಪಿಸಿದರು.