ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಮರುಳಸಿದ್ದರಾಧ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಮರುಳಸಿದ್ದರಾಧ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿ ಕಾಲೇಜು ಸಂಭಾಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ, ಯಾದಗಿರಿ ಹಾಗೂ ಶಶಿ ಚಾರಿಟೇಬಲ್ ಮತ್ತು ಎಜುಕೇಷನಲ್ ಟ್ರಸ್ಟ್, ವಿಜಯ ವಿಠಲ ಸೇವಾ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಯಾದಗಿರಿ ರವರ ಸಹಯೋಗದೊಂದಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಕುರಿತು ಜಿಲ್ಲಾ ಮಟ್ಟದ ಜನಜಾಗೃತಿ ಅಭಿಯಾನ ಮನೆ ಮನೆಗೂ ಮಣ್ಣಿನ ಗಣಪ-ಉಚಿತ ಮಣ್ಣಿನ ಗಣಪತಿ ವಿತರಿಸಿ ಮಾತನಾಡಿದರು.

ಸರ್ಕಾರ ತನ್ನದೇ ಆದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿದೆ. ಅದೇ ರೀತಿ ಸಾರ್ವಜನಿಕರಲ್ಲಿಯೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಸಾಮಾಜಿಕ ಹೊಣೆಗಾರಿಕೆಗಳ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ. ಸರ್ಕಾರಿ ಸಂಸ್ಥೆಗಳ ಜತೆಗೆ ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಾವು ಆಚರಿಸುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಸಂಭ್ರಮದ ಜತೆಗೆ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ವಿಶೇಷವಾಗಿ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದರು.

ಪಿಓಪಿ ಗಣಪತಿ ಮೂರ್ತಿಗಳ ಬಳಕೆಗೆ ಈಗಾಗಲೇ ಕಾನೂನಿನ ಮೂಲಕ ನಿಷೇಧವಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಪ್ರಕರಣದಂತಹ ಕಾನೂನು ಕ್ರಮಗಳಿಗೆ ಅವಕಾಶವಿದೆ. ಆದ್ದರಿಂದ ಸಾರ್ವಜನಿಕರು ಮಣ್ಣಿನಿಂದ ನಿರ್ಮಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, 30–40 ವರ್ಷಗಳಿಂದ ಪರಿಸರದ ಬಗ್ಗೆ ಸಾಕಷ್ಟು ಮಹತ್ವ ನೀಡುತ್ತಿದ್ದರೂ, ಇಂದಿನ ಪರಿಸ್ಥಿತಿಯಲ್ಲಿ ಮಣ್ಣು, ನೀರು ಹಾಗೂ ವಾಯು ಮಾಲಿನ್ಯ ಸಹಿತ ವಿವಿಧ ರೀತಿಯ ಮಾಲಿನ್ಯದಿಂದ ಪರಿಸರಕ್ಕೆ ಗಂಭೀರ ಹಾನಿಯಾಗಿದೆ ಎಂದರು.

ಪರಿಸರ ಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ಯಾದಗಿರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಒಂದು–ಎರಡು ತಿಂಗಳಿಂದ ವಿವಿಧ ತಾಲೂಕು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.

ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಮಾತನಾಡಿದರು. ಶಶಿ ಚಾರಿಟೇಬಲ್ & ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕ ಹನುಮಂತಪ್ಪ ಶಿರಗೋಳ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸಿದ್ದರಾಜ ರೆಡ್ಡಿ, ಮಲ್ಲಿಕಾ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಗೋಸಿ, ವಿಠ್ಠಲ ಸೇವಾ ಸಂಸ್ಥೆ ಅಧ್ಯಕ್ಷ ವಿಠಲ್ ಕುಲಕರ್ಣಿ, ಶಶಿ ಚಾರಿಟಬಲ್ ಎಜ್ಯುಕೇಷನಲ್ ಆಧ್ಯಕ್ಷ ಮಲ್ಲಿಕಾರ್ಜುನ ಶಿರಗೊಳ ಇದ್ದರು.