ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮಡಿಕೇರಿ ರೋಟರಿ, ಕಡಗದಾಳು ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಕಡಗದಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶುಭ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಮರ ಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ಕಾಣಬೇಕು ಎಂದು ಹೇಳಿದರು.ಬಾಲ್ಯ ವಿವಾಹವು ಸಾಮಾಜಿಕ ಪಿಡುಗಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಕುಗ್ಗಿಸುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಡೆಗಣಿಸಿದ್ದಲ್ಲಿ ಸಮಾಜ ಅಧಃಪತನಕ್ಕೆ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು.ಮಡಿಕೇರಿ ರೋಟರಿ ಅಧ್ಯಕ್ಷ ಸುದೈ ನಾಣಯ್ಯ ಮಾತನಾಡಿ, ಹಿಂದೆ ಹಲವು ಕಾಡು ಹಣ್ಣುಗಳನ್ನು ನೋಡುತ್ತಿದ್ದೆವು. ಆದರೆ ಇಂದಿನ ಮಕ್ಕಳಿಗೆ ಕಾಡು ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಕಾಡು ಹಣ್ಣು ಸೇರಿದಂತೆ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.
ವಿವಿಧ ರೀತಿಯ ಹಣ್ಣಿನ ಗಿಡಗಳು ಹಾಗೂ ಮರಗಳನ್ನು ಬೆಳೆಯಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯವಾಗಲಿದೆ. ರೋಟರಿ ಸಂಸ್ಥೆಯು ಪರಿಸರ ಸಂರಕ್ಷಣೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.ಪ್ರಮುಖರಾದ ಕೆ.ಎಸ್. ತಮ್ಮಯ್ಯ ಮಾತನಾಡಿ, ಜಲಸಿರಿ, ವನಸಿರಿ, ಆರೋಗ್ಯ ಸಿರಿ ಹಾಗೂ ವಿದ್ಯಾಸಿರಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಜೊತೆಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು ಎಂದರು.ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳನ್ನು ಉಪಯೋಗಿಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆ ನಿಟ್ಟಿನಲ್ಲಿ ಹಲವು ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿವೆ ಎಂದು ಹೇಳಿದರು.ಪ್ರಮುಖರಾದ ಸುರೇಶ್ ಚಂಗಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪರಿಸರ ಪ್ರಜ್ಞೆ ಹೆಚ್ಚಿನದ್ದಾಗಿದೆ. ಪರಿಸರ ಜಾಗೃತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು. ಪರಿಸರವನ್ನು ಮತ್ತಷ್ಟು ಸಂರಕ್ಷಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು. ರೋಟರಿ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ, ಸದಸ್ಯರಾದ ಪಾರ್ವತಿ, ಮಲ್ಲಿಕಾ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್.ಜಯಪ್ಪ ಸ್ವಾಗತಿಸಿದರು. ಆರತಿ ನಿರೂಪಿಸಿದರು. ಹರ್ಷಿತಾ ಪ್ರಾರ್ಥಿಸಿದರು. ವಿಮಲ ವಂದಿಸಿದರು.