ಪರಿಸರಪ್ರೇಮಿ ಭೂಹಳ್ಳಿ ಪುಟ್ಟಸ್ವಾಮಿ ಇನ್ನಿಲ್ಲ

| Published : Jul 30 2024, 12:35 AM IST

ಸಾರಾಂಶ

ಚನ್ನಪಟ್ಟಣ: ಸಾಹಿತಿ, ಪರಿಸರವಾದಿ, ಸಮಾಜಮುಖಿ ಚಿಂತಕ, ಭೂಹಳ್ಳಿ ಪುಟ್ಟಸ್ವಾಮಿ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ೨.೪೦ ಗಂಟೆಯಲ್ಲಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನಯಾತ್ರೆ ಮುಗಿಸುತ್ತಿದ್ದೇನೆ ಎಂದು ದಿನಾಂಕ ಹಾಗೂ ಸಮಯ ನಮೂದಿಸಿ ನೇಣಿಗೆ ಶರಣಾಗಿದ್ದಾರೆ.

ಚನ್ನಪಟ್ಟಣ: ಸಾಹಿತಿ, ಪರಿಸರವಾದಿ, ಸಮಾಜಮುಖಿ ಚಿಂತಕ, ಭೂಹಳ್ಳಿ ಪುಟ್ಟಸ್ವಾಮಿ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ೨.೪೦ ಗಂಟೆಯಲ್ಲಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನಯಾತ್ರೆ ಮುಗಿಸುತ್ತಿದ್ದೇನೆ ಎಂದು ದಿನಾಂಕ ಹಾಗೂ ಸಮಯ ನಮೂದಿಸಿ ನೇಣಿಗೆ ಶರಣಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ಇವರು ಹಾಕಿದ್ದ ಪೋಸ್ಟ್ ನೋಡಿದ ಹಿತೈಷಿಗಳು ಹಾಗೂ ಬಂಧುಮಿತ್ರರು ಮನೆಗೆ ಹೋಗಿ ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಪೊಲೀಸರು ಪುಟ್ಟಸ್ವಾಮಿ ಅವರ ಮೃತದೇಹವನ್ನು ಇಳಿಸಿದ್ದಾರೆ.

ಭೂಹಳ್ಳಿಯಲ್ಲಿ ಜನನ:

ತಾಲೂಕಿನ ಭೂಹಳ್ಳಿಯ ಚಿಕ್ಕಹೈದಯ್ಯ-ಸಿದ್ದಮ್ಮ ದಂಪತಿ ಪುತ್ರನಾಗಿ ೧೯೫೫ರಲ್ಲಿ ಜನಿಸಿದರು. ಇತಿಹಾಸ ವಿಷಯದಲ್ಲಿ ಎಂ.ಎ ಮಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ನೇಮಕಗೊಂಡರು. ಅವರು ನೊಣವಿನಕೆರೆ, ರಟ್ಟಕಲ್, ಹುಣಸೂರು, ಸಾಲಿಗ್ರಾಮ, ಚಕ್ಕೆರೆ, ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಉಪನ್ಯಾಸಕ, ಸಾಹಿತಿ:

ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದ ಇವರು, ೨೫ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಳ್ಳಿ ಮನೆ ಲುಂಬಿನಿ, ನೂರು ಸ್ವರ, ಎಲ್ಲರ ಹೆಜ್ಜೆ, ಭಾವ ಮಂಜರಿ, ನೆಲದ ಕಂಬನಿ, ಸ್ವಾತಂತ್ರ್ಯಕ್ಕೆ ಜೀವವಿದೆ, ಗೋಜಲು, ಬೆಳದಿಂಗಳ ಕುಡಿ, ಲಾವಣಿ ಹಾಡು, ಅಕ್ಷರ ಗುಡಿ ನಾಟಕ, ಅಗ್ರಹಾರ ಬೀದಿಗಳಲ್ಲಿ ಹೀಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ನಾಡಿನಾದ್ಯಂತ ವಿವಿಧ ಕವಿಗೋಷ್ಠಿಗಳಲ್ಲಿ ಕವಿಯಾಗಿ, ಕವಿಗೋಷ್ಠಿಯ ಅಧ್ಯಕ್ಷರಾಗಿ ಕವಿತಾ ವಾಚನ ಮಾಡಿದ್ದಾರೆ. ಆಕಾಶವಾಣಿ, ದೂರದರ್ಶನ, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಕವಿತೆಗಳು ಬೆಳಕು ಕಂಡಿವೆ. ಪರಿಸರ ಇಲಾಖೆ ಇವರ ಕವಿತೆಗಳ ಸಿಡಿ ಬಿಡುಗಡೆ ಮಾಡಿದೆ. ಸಂವಾದ ಹೆಸರಿನ ಎನ್‌ಜಿಒ ಸಂಸ್ಥೆ ಇವರ ಬಗೆಗೆ ಸಾಕ್ಷ್ಯಚಿತ್ರ ನಿರ್ಮಿಸಿದೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.

ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದ ಇವರು, ನೇರ ನಿಷ್ಠುರವಾದಿ. ಯಾರೊಂದಿಗೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಭೂಹಳ್ಳಿ ಪುಟ್ಟಸ್ವಾಮಿ ಟ್ರಸ್ಟ್ ಸ್ಥಾಪನೆ ಮಾಡಿಕೊಂಡು ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಪುಟ್ಟಸ್ವಾಮಿ ಪತ್ನಿ ಗಾಯತ್ರಿ ಹಾಗೂ ಪುತ್ರರಾದ ಬಿ.ಪಿ.ಸುಕೃತ ಸಾಗರ್, ಬಿ.ಪಿ.ಸಾತ್ವಿಕ್ ಸಾಗರ್ ಪ್ರಸ್ತುತ ಮೈಸೂರಿನ ಬೆಳವಾಡಿ ಬಡಾವಣೆಯಲ್ಲಿ ನೆಲೆಸಿದ್ದು, ಪುಟ್ಟಸ್ವಾಮಿಯವರು ಮಾತ್ರ ಚನ್ನಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಗಾಗ್ಗೆ ಮೈಸೂರಿಗೆ ಹೋಗಿ ಬರುತ್ತಿದ್ದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಭೂಹಳ್ಳಿಯಲ್ಲಿ ಸೋಮವಾರ ಸಂಜೆ ನೆರವೇರಿತು.

ಬಾಕ್ಸ್‌................

ಪರಿಸರ ಪ್ರೇಮಿ:

ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೆ ತಾವಾಯಿತು ತಮ್ಮ ಕುಟುಂಬವಾಯಿತು ಎಂದು ವಿಶ್ರಾಂತಿ ಜೀವನ ನಡೆಸುವ ಮಂದಿಯೇ ಹೆಚ್ಚು. ಆದರೆ, ಪುಟ್ಟಸ್ವಾಮಿ ತಮ್ಮ ಸ್ವಂತ ಹಣ, ನಿವೃತ್ತಿ ಹಣ, ಪಿಂಚಿಣಿ ಹಣ ವಿನಿಯೋಗಿಸಿಕೊಂಡು ೩೦ರಿಂದ ೪೦ ಎಕರೆಗಳಷ್ಟು ಸರ್ಕಾರಿ ಜಾಗದಲ್ಲಿ ೪೦ರಿಂದ ೪೫ ಲಕ್ಷ ವೆಚ್ಚ ಮಾಡಿ ಸಹಸ್ರಾರು ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ.

ಭೂಹಳ್ಳಿಯ ಸಮೀಪದ ಉಜ್ಜನಹಳ್ಳಿಯ ಗುಡ್ಡ, ನಗರದ ಕಣ್ವ ಬಡಾವಣೆಯ ಪಾರ್ಕಿಂಗ್ ಜಾಗ, ಮಹದೇಶ್ವರ ನಗರ, ಸಿಎಂಸಿ ಬಡಾವಣೆ, ಎಲೆಕೇರಿ, ಚನ್ನಪಟ್ಟಣ ರೈಲ್ವೆ ಸ್ಟೇಷನ್ ಇಂತಹ ಜಾಗದಲ್ಲಿ ಸಸಿನೆಟ್ಟು ಬೆಳೆಸಿದ್ದಾರೆ. ತೇಗ, ಮಾವು, ಬೇವು, ಸೀಬೆ, ಸಪೋಟ, ಹತ್ತಿಮರ, ಮತ್ತಿ ಮರ, ನೇರಳೆ, ಮುತ್ತುಗ, ಆಲದ ಮರ, ಅರಳೀಮರ , ಹೆಬ್ಬೇವು, ಸಿಲ್ವರ್, ಆಕಾಶ ಮಲ್ಲಿಗೆ, ಬೆಟ್ಟದ ನೆಲ್ಲಿ, ತಾರೆ ಮರ, ಬಿದಿರು, ಬಿಲ್ವ ಪತ್ರೆ, ಹೊಂಗೆ ಮರ, ಹಿಪ್ಪೆ ಮರ ಸೇರಿದಂತೆ ವಿವಿಧ ಜಾತಿಯ ಸಸಿಗಳು ಮರಗಳಾಗಿ ನಿಂತಿವೆ.

ಬಾಕ್ಸ್‌...........

ವೇದಿಕೆ ನಿರ್ಮಾಣ:

ಬುದ್ಧವನ, ಬುದ್ಧೇಶ್ವರವನ (ಕವಿವನ), ಜೀವೇಶ್ವರ ವನ, ಪುಲಿಕೇಶಿ ವನ, ನೃಪತುಂಗ ವನ, ಕದಂಬವನ, ಗಾಂಧೀವನ, ಅಂಬೇಡ್ಕರ್‌ ವನ ಹೀಗೆ ವನಗಳಿಗೆ ನಾಮಕರಣ ಮಾಡಿದ್ದಾರೆ. ಅಲ್ಲದೆ ಬುದ್ಧೇಶ್ವರ ವನದಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ವೇದಿಕೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಗ್ರಂಥಾಲಯಕ್ಕಾಗಿ ಕೊಠಡಿಯೊಂದನ್ನು ಕಟ್ಟಿಸಿದ್ದಾರೆ. ನೂರು ಜನ ಕುಳಿತುಕೊಳ್ಳಬಹುದಾದಷ್ಟು ಸಿಮೆಂಟ್‌ ಬೆಂಚುಗಳ ವ್ಯವಸ್ಥೆಯನ್ನೂ ಮಾಡಿಟ್ಟಿದ್ದಾರೆ. ಇಷ್ಟೆಲ್ಲ ಮಾಡಿದರೂ ಅವರು ಪ್ರಚಾರ ಪ್ರಿಯರಾಗಿರಲಿಲ್ಲ. ಇಲ್ಲಿಯವರೆಗೆ ಅಷ್ಟೂ ವನಗಳನ್ನು ತಮ್ಮ ಮಕ್ಕಳಂತೆ ಜೋಪಾನ ಜತನದಿಂದ ನೋಡಿಕೊಂಡಿದ್ದರು.

ಪೊಟೋ೨೯ಸಿಪಿಟ೨:

ಭೂಹಳ್ಳಿ ಪುಟ್ಟಸ್ವಾಮಿ

ಪೊಟೋ೨೯ಸಿಪಿಟಿ೩:

ಭೂಹಳ್ಳಿ ಪುಟ್ಟಸ್ವಾಮಿ ನಿರ್ಮಿಸಿರುವ ಜೀವೇಶ್ವರ ವನ.