ಸಾರಾಂಶ
ಕನ್ನಡಪ್ರಭವಾರ್ತೆ ಚಿಕ್ಕಮಗಳೂರುಅತ್ಯಂತ ಪರಿಸರ ಸೂಕ್ಷ್ಮ ಸ್ಥಳ ಎಂದು ಘೋಷಣೆಯಾಗಿರುವ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಪರಿಸರದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ ಹೆಲಿ ಟೂರಿಸಂ ಆರಂಭಿಸಲು ನಿರ್ಧರಿಸಿದೆ ಎಂದು ಪರಿಸರಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರವಾಸೋದ್ಯಮ ಇಲಾಖೆ ನೀಡಿರುವ ಘೋಷ ವಾಕ್ಯ ‘ಜಾಯ್ ರೈಡ್’ ಎಂದು. ಈ ಇಲಾಖೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮುನ್ನ ಮುಳ್ಳಯ್ಯನಗಿರಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಿರಿ ಪ್ರದೇಶದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್‌ವೇಶನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸದಸ್ಯ ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮುಳ್ಳಯ್ಯನಗಿರಿ ರಾಜ್ಯದಲ್ಲೇ ಅತೀ ಎತ್ತರದ ಶಿಖರವಾಗಿದ್ದು, 6317 ಅಡಿ ಎತ್ತರದಲ್ಲಿದೆ. ಇದು, ಕೇವಲ ಎತ್ತರದ ಗಿರಿ ಪ್ರದೇಶ ಮಾತ್ರವಾಗಿರದೆ ಪಶ್ಚಿಮಘಟ್ಟದ ವಿಶೇಷತೆಯಾದ ಶೋಲಾ ಕಾಡುಗಳನ್ನು ತನ್ನ ಇಳಿಜಾರಿನಲ್ಲಿ ಹೊಂದಿದ್ದು, ಕಾಡುಗಳ ಪಕ್ಕದಲ್ಲೇ ಅತ್ಯಂತ ಎತ್ತರದ ಹುಲ್ಲು ಬೆಳೆಯುವ ಪ್ರದೇಶವೂ ಆಗಿದೆ ಎಂದು ಹೇಳಿದ್ದಾರೆ.ಬಹು ಮುಖ್ಯವಾಗಿ ಹೊನ್ನಮ್ಮನಹಳ್ಳ, ಹೆಬ್ಬೇ ಹಳ್ಳ, ತಡಬೇ ಹಳ್ಳ, ವಾಟೇಹಳ್ಳ ನೀರಿನ ಮೂಲವೂ ಆಗಿದ್ದು, ಈ ಹಳ್ಳಗಳ ನೀರು ಭದ್ರಾನದಿಯ ಉಪ ನದಿಯಾದ ಸೋಮವಾಹಿನಿ ಹರಿವನ್ನು ಸೇರುತ್ತದೆ. ಇಲ್ಲಿ ವೇದಾವತಿ ನದಿಯನ್ನು ಸಮೃದ್ಧಗೊಳಿಸುವ ವೇದಾ ನದಿ ಹುಟ್ಟುತ್ತದಲ್ಲದೆ, ಮದಗದಕೆರೆ ಮತ್ತು ಅಯ್ಯನಕೆರೆಗೂ ನೀರುಣಿಸುವ ಜಲಮೂಲವನ್ನು ಹೊಂದಿದೆ ಎಂದಿದ್ದಾರೆ.ಅತ್ಯಂತ ಉತ್ತಮ ಜಲಮೂಲಕ್ಕೂ ಆಧಾರವಾದ ಮುಳ್ಳಯ್ಯನಗಿರಿ ಅದರ ತಗ್ಗಿನ ಅನೇಕ ಗ್ರಾಮಗಳಿಗೆ ನೀರುಣಿಸುತ್ತದೆ. ಬಹುಮುಖ್ಯವಾಗಿ ಈ ಬೆಟ್ಟ ಪ್ರದೇಶಕ್ಕೆ ಚಳಿಗಾಲದಲ್ಲಿ ಹಲವಾರು ಹಕ್ಕಿಗಳು ವಲಸೆ ಬರುತ್ತವೆ. ಇದರಲ್ಲಿ ಅತ್ಯಂತ ಅಪರೂಪದ ಬೇಟೆ ಹಕ್ಕಿಗಳೂ ಸೇರಿದಂತೆ ಹುಲ್ಲುಗಾವಲನ್ನೇ ಆಶ್ರಯಿಸುವ ಹಕ್ಕಿಗಳು ಹಾಗೂ ಅತ್ಯಂತ ಸೂಕ್ಷ್ಮತೆ ಹೊಂದಿರುವ ಶೋಲಾ ಕಾಡುಗಳಿಗೆ ಸೀಮಿತವಾದ ಬಿಳಿ ಹೊಟ್ಟೆಯ ಶಾರ್ಟ್‌ವಿಂಗ್ ಪಕ್ಷಿಗಳು, ಕಪ್ಪು ಮತ್ತು ಕಿತ್ತಳೆ ಬಣ್ಣದ ನೊಣ ಹಿಡುಕ ಹಾಗೂ ಇಲ್ಲಿ ಮಾತ್ರ ಕಾಣಸಿಗುವ ಬ್ಲ್ಯಾಕ್ ಬರ್ಡ್ ಸಹ ಗೋಚರಿಸುತ್ತವೆ. ಈ ಬೆಟ್ಟ ಪ್ರದೇಶಕ್ಕೆ ಮಧ್ಯ ಏಷ್ಯಾ, ಹಿಮಾಲಯದಿಂದ ವಲಸೆ ಬರುವ ಹಲವು ಹಕ್ಕಿಗಳಿಗೆ ಹಾಗೂ ಇಲ್ಲೇ ಕಾಣಸಿಗುವ ಹಕ್ಕಿಗಳು ಸಂತಾನ ಬೆಳೆಸಲು ಗೂಡು ಕಟ್ಟುತ್ತವಲ್ಲದೆ, ಸಮೃದ್ಧ ಆಹಾರದ ಬೇಟೆಗೂ ಈ ಸ್ಥಳ ಅತ್ಯಂತ ಅವಲಂಬಿತ ಪ್ರದೇಶವಾಗಿದೆ. ಪಕ್ಷಿ ಸಮೂಹದ ಜೊತೆಗೆ ಬೇಟೆ ಪ್ರಾಣಿಗಳಾದ ಹುಲಿ, ಚಿರತೆಗಳ ಓಡಾಟವೂ ಇದ್ದು, ಹುಲ್ಲುಗಾವಲು ಹಾಗೂ ಶೋಲಾ ಕಾಡುಗಳನ್ನೇ ಆಶ್ರಯಿಸುವ ಕಾಟಿ, ಕಡವೆ ಹಾಗೂ ಕೆಂದಳಿಲನ್ನು ನೋಡಬಹುದು. ಶಬ್ದಕ್ಕೆ ಬಹುಬೇಗ ಸ್ಪಂದಿಸಿ ಆತಂಕಕ್ಕೆ ಒಳಗಾಗುವ ಹಲವು ಪ್ರಭೇದದ ಕಪ್ಪೆ ಮತ್ತು ಹಾವಿಗೂ ಇದು ಆಶ್ರಯ ತಾಣವಾಗಿದೆ.
ಈ ಜೀವ ವೈವಿಧ್ಯತಾ ಹಾಗೂ ಸಸ್ಯ ವೈವಿಧ್ಯತಾ ಸೂಕ್ಷ್ಮ ಬೆಟ್ಟ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಹಾರಾಟದಿಂದ ಆಗುವ ಕಂಪನ ಹಾಗೂ ಶಬ್ದ, ಗಾಳಿಯಲ್ಲಾಗುವ ಬದಲಾವಣೆ ಪ್ರಾಣಿ, ಪಕ್ಷಿಗಳ ನಿರಾತಂಕ ಬದುಕಿಗೆ ಧಕ್ಕೆ ತರುವುದಲ್ಲದೆ, ಜನರ ಗದ್ದಲವೂ ಸಹ ಈ ಪ್ರದೇಶದಲ್ಲಿ ಪರಿಸರ ಸೂಕ್ಷ್ಮತೆಗೆ ಹೆಚ್ಚಿನ ಘಾಸಿ ಉಂಟು ಮಾಡುವ ಸಂಭವವಿದೆ. ಈಗಾಗಲೇ ಜನ ಹಾಗೂ ವಾಹನಗಳ ಅಧಿಕ ಓಡಾಟ ಹಾಗೂ ಘನ ತ್ಯಾಜ್ಯ ಹಾಗೂ ನೀರಿನ ಮೂಲವೂ ಕಲುಷಿತಗೊಂಡು ತತ್ತರಿಸಿರುವುದನ್ನು ತಡೆಗಟ್ಟುವಲ್ಲಿ ಪ್ರವಾಸೋದ್ಯಮ ಇಲಾಖೆ ವಿಫಲವಾಗಿದ್ದು, ಇದೀಗ ಹೆಲಿಕ್ಯಾಪ್ಟರ್ ಹಾರಾಟವನ್ನು ಅದರಲ್ಲೂ ಪಕ್ಷಿಗಳು ವಲಸೆ ಬರುವ ಚಳಿಗಾಲದಲ್ಲಿ ಆರಂಭ ಮಾಡಿದಲ್ಲಿ ಈ ಜೀವಿಗಳ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಲಿ ಟೂರಿಸಂ ಯೋಜನೆಯನ್ನು ಕೈಬಿಟ್ಟು ಈ ಸೂಕ್ಷ್ಮ ಪ್ರದೇಶದ ಪ್ರಾಮುಖ್ಯತೆಯನ್ನು ಅರಿತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಆ ಬೆಟ್ಟ ಪ್ರದೇಶವನ್ನು ರಕ್ಷಿಸಲು ಮುಂದಾಗಬೇಕು ಹಾಗೂ ಅಲ್ಲಿ ಹುಟ್ಟಿ ಹರಿಯುವ ಜಲಮೂಲಗಳಿಗೆ ಆಗುತ್ತಿರುವ ಮಾಲಿನ್ಯ ತಡೆಯಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.