ಹುಬ್ಬಳ್ಳಿ:
ದೇಶವಲ್ಲದೆ ವಿದೇಶದಲ್ಲೂ ಚರ್ಚೆಯಾಗುತ್ತಿರುವ ಎಪ್‌ಸ್ಟೀನ್ ಸಂಬಂಧಿತ ದಾಖಲೆಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಒತ್ತಾಯಿಸಿ ಸೋಮವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಲಾಯಿತು.ಇಲ್ಲಿನ ವಿದ್ಯಾನಗರದ ಆರ್ಟ್ಸ್ ಕಾಲೇಜು ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಪ್‌ಸ್ಟೀನ್ ಇರುವ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಸ್ತೆ ತಡೆಯಲು ಮುಂದಾದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ರಸ್ತೆ ತಡೆಯಲು ಮುಂದಾದ ಪ್ರತಿಭಟನಾಕರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕೇಂದ್ರ ಸಚಿವ ಹರ್ದಿಪ್‌ಸಿಂಗ್ ಪುರಿ ಅವರು 4 ಬಾರಿ ಎಪ್‌ಸ್ಟೀನ್‌ಗೆ ಭೇಟಿಯಾಗಿ ಅವರೊಂದಿಗೆ ನಮ್ಮ ಡಿಜಿಟಲ್ ಇಂಡಿಯಾ ಬಗ್ಗೆ ಚರ್ಚೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.ಈ ವೇಳೆ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಪಾಟೀಲ, ರಾಜ್ಯ ಕಾರ್ಯದರ್ಶಿ ಹನೀಫ್ ಖುರೇಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶೀತಲ್ ಮಠಪತಿ, ಶಾನುಖಾನ್, ಶುಜಾಹುದ್ದೀನ್ ವಾಚಮೇಕರ್, ರಾಹುಲ್ ಉಪ್ಪಲದಡ್ಡಿ, ಲಿಂಗರಾಜ ನೂಲ್ವಿ, ರೋಹಿತ್ ಕಲ್ಯಾಣಿ, ದೀಪಕ್ ಕಟಾರೆ, ಸಚಿನ್ ಪೂಜಾರ್, ಚಂದ್ರು ಸಂಕನವರ ಸೇರಿದಂತೆ ಹಲವರಿದ್ದರು.