ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಂತಹ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ.

ಲಕ್ಷ್ಮೇಶ್ವರ: ಮಕ್ಕಳ ಪ್ರತಿಭೆ ಪ್ರಕಾಶಿಸಲು ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ. ಪ್ರತಿಭೆ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾಗಿರುವುದಿಲ್ಲ. ಪಠ್ಯೇತರ ಚಟುವಟಿಕೆಗಳು ಕೂಡ ಪ್ರತಿಭೆಯ ಇನ್ನೊಂದು ಮುಖ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಇಲಾಖೆ ಸಮಾನ ಆದ್ಯತೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿ ನಾಯ್ಕ ತಿಳಿಸಿದರು.

ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಲಕ್ಷ್ಮೇಶ್ವರ ದಕ್ಷಿಣ ಮತ್ತು ಲಕ್ಷ್ಮೇಶ್ವರ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಲಿಟಲ್ ಹಾರ್ಟ್ಸ್ ಶಾಲೆಯ ಅಧ್ಯಕ್ಷ ರಾಮೇಶ್ವರ ಶಿರಹಟ್ಟಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಂತಹ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತಮ ಅವಕಾಶ ಹಾಗೂ ಗುರುತಿಸುವಿಕೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳಲ್ಲಿ ನಾಯಕತ್ವ, ಹೊಂದಾಣಿಕೆ, ದೇಶಭಕ್ತಿ, ಸಾಮರಸ್ಯ, ಸಹಕಾರ ಮನೋಭಾವವನ್ನು ಉಂಟುಮಾಡುತ್ತದೆ ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ ಮಾತನಾಡಿ, ನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸುವ ಜತೆಗೆ ಮುಂದಿನ ಪೀಳಿಗೆಗೆ ದಾಟಿಸುವ ಮಹಾನ್ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಎಸ್.ಕೆ. ಹವಾಲ್ದಾರ, ಎಸ್.ಎಚ್. ಪೂಜಾರ, ಎಸ್.ಡಿ. ಲಮಾಣಿ, ಎ.ಎಂ. ಅಕ್ಕಿ, ಎಂ.ಎ. ನದಾಫ, ಜೆ.ವಿ. ಅರಳಿಕಟ್ಟಿ, ಬಿಆರ್‌ಪಿ ಬಿ.ಎಂ. ಯರಗುಪ್ಪಿ, ಮುಖ್ಯ ಶಿಕ್ಷಕ ಗಂಗಾಧರ ಶಿರಹಟ್ಟಿ, ಪ್ರಧಾನ ಶಿಕ್ಷಕ ಬಸವರಾಜ ಎಂ. ಕುಂಬಾರ, ಬಿ.ಎಚ್. ನಡುವಿಮನಿ, ಗುರು ನಾಯಕ, ಸಿಆರ್‌ಪಿ ಎನ್.ಎ. ಮುಲ್ಲಾ, ಸಿ.ವಿ. ವಡಕಣ್ಣವರ, ಗಿರೀಶ ನೇಕಾರ, ನವೀನ ಅಂಗಡಿ, ಸತೀಶ್ ಬೊಮಲೆ, ಎನ್.ಎನ್. ಶಿಗ್ಲಿ, ಎಚ್.ಡಿ. ನಿಂಗರಡ್ಡಿ, ಗಿರೀಶ ಸುಗಜಾನವರ, ಜಿ.ಎನ್. ಶೀರನಹಳ್ಳಿ, ಎಲ್.ಆರ್. ಮಲಸಮುದ್ರ, ಎಚ್. ಪ್ರೇಮಾ, ಪಿ.ಎಂ. ಸಾಂಗ್ಲಿಕರ, ಎನ್.ಎಸ್. ಬಂಕಾಪುರ ಹಾಗೂ ಕ್ಲಸ್ಟರಿನ ಮುದ್ದು ಮಕ್ಕಳು ಇದ್ದರು. ಬಿಆರ್‌ಪಿ ಈಶ್ವರ ಮೇಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿ ಉಮೇಶ ನೇಕಾರ ಸ್ವಾಗತಿಸಿದರು. ಶ್ರೀನಿವಾಸ ಮತ್ತೂರ ವಂದಿಸಿದರು, ಸುವರ್ಣ ಹಡಗಲಿ ನಿರೂಪಿಸಿದರು.

ಗಮನ ಸೆಳೆದ ನೃತ್ಯ ಪ್ರದರ್ಶನ

ದ.ರಾ. ಬೇಂದ್ರಯವರ ಕುರುಡು ಕಾಂಚಾಣ ಕುಣಿಯುತ್ತಿತ್ತು ಎಂಬ ಹಾಡಿಗೆ ಪಟ್ಟಣದ ರಂಭಾಪುರಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಮೇಘನಾ ಹುಳಕಯಲ್ಲಪ್ಪನವರ ಅಭಿನಯಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.