ಸಾರಾಂಶ
ಕಾರಟಗಿ: ಹಳ್ಳಿಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಉಳ್ಳವರು ಬಡವರಿಗೆ ನೆರವಾಗುವಂತಹ ಸಾರ್ಥಕ ಕೆಲಸಗಳು ನಡೆದರೆ ಸಮಾಜದಲ್ಲಿ ಸಮಾನತೆ, ಸಾಮರಸ್ಯದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೆಬ್ಬಾಳದ ಡಾ. ನಾಗಭೂಷಣ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮರ್ಲಾನಹಳ್ಳಿಯಲ್ಲಿ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ೩೭ನೇ ವರ್ಷದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಭತ್ತದ ಕಣಿಜ ಶ್ರೀಮಂತ ಪ್ರದೇಶ. ಜನರು ಆರ್ಥಿಕವಾಗಿ ಶ್ರೀಮಂತರಲ್ಲದೆ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಜತೆಗೆ ಸಮೃದ್ಧಿ ಜೀವನದ ನಡುವೆ ಮಾನವೀಯ ಮೌಲ್ಯ ಮರೆತಿಲ್ಲ. ನಮ್ಮ ಭಾಗದ ರೈತರು, ಉದ್ಯಮಿಗಳು, ವರ್ತಕರು ಅನ್ನ ದಾಸೋಹಕ್ಕೆ ಸದಾ ಕೈ ಮುಂದು ಮಾಡುತ್ತಾರೆ. ನಾಡಿನ ಎಲ್ಲಡೆ ಇರುವ ಮಠಮಾನ್ಯಗಳು ನಡೆಸುವ ಅನ್ನ ದಾಸೋಹ, ಜಾತ್ರೆ ಇರಲಿ ನಮ್ಮ ಕಷ್ಟಗಳನ್ನು ಮರೆತೂ ಅನ್ನ ದಾಸೋಹ ಮಾಡುತ್ತೇವೆ.ಈ ಅನ್ನ ದಾಸೋಹದ ಜತೆಗೆ ನಮ್ಮ ನೀರಾವರಿ ಭಾಗದ ಎಲ್ಲ ಹಳ್ಳಿಗಳಲ್ಲಿ ನಡೆಯುವ ಪುರಾಣ-ಜಾತ್ರೆಯಲ್ಲಿಯೂ ಸಹ ನಾವು ಸಾಮೂಹಿಕ ವಿವಾಹಗಳನ್ನು ಸಂಪ್ರದಾಯದಂತೆ ಆಚರಿಸುತ್ತಿದ್ದೇವೆ. ಈ ಸಂಪ್ರದಾಯ ಈಗ ಬಡವರಿಗೆ ನೆರವಾಗುತ್ತದೆ ಎಂದರು.
ಸತಿ ಪತಿಗಳು ಒಬ್ಬರನೊಬ್ಬರು ಸುಖವಾಗಿ ಸಂಸಾರ ಸಾಗಿಸಲಿ. ವಿವಾಹ ಬಂಧ ಎಂದರೆ ಎರಡು ಮನಸ್ಸುಗಳು ಒಂದಾಗಿ ಪರಸ್ಪರ ಹಾಲು ಜೇನಿನಂತೆ ಜೀವನ ನಡೆಸುವುದು. ಪ್ರಗತಿಯತ್ತ ಸಾಗಲು ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕಿದೆ. ಇನ್ನು ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗಳು ಅನೋನ್ಯದಿಂದ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ಧೇಶ ಸಾರ್ಥಕಪಡಿಸಬೇಕಿದೆ ಎಂದರು.೨೬ ಜೋಡಿ: ಶ್ರೀಶ್ರೀನಿವಾಸ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ೨೬ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾಗನಕಲ್ ಹಿರೇಮಠದ ಡಾ.ಶರಣಯ್ಯಸ್ವಾಮಿಗಳ ನೇತೃತ್ವದಲ್ಲಿ ವಿವಾಹದ ವಿಧಿ ವಿಧಾನಗಳು ನಡೆದವು. ಈ ವೇಳೆ ವರನಿಗೆ, ವಧುವಿಗೆ ಮತ್ತು ಚಿನ್ನದ ತಾಳಿ, ಮೂಗುಬೊಟ್ಟು, ಬೆಳ್ಳಿ ಕಡಗ, ಬೆಳ್ಳಿ ಕಾಲುಂಗುರ ಮತ್ತು ವಧು ವರರಿಗೆ ಮದುವೆ ವಸ್ತ್ರಗಳನ್ನು ನೀಡಲಾಯಿತು. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ಜನರಿಗೆ ಅಚ್ಚುಕಟ್ಟಾದ ಊಟ ವ್ಯವಸ್ಥೆ ಸಂಘಟಕರು ಮಾಡಿದ್ದರು.
ಈ ವೇಳೆ ಎಂ.ನರಸಿಂಹರಾವ್, ಎಂ.ಸುಬ್ಬಾರಾವ್, ದಾನಿಗಳಾದ ಟಿ. ಅಮರಲಿಂಗೇಶ್ವರರಾವ್, ನೆಕ್ಕಂಟಿ ನಾಗರಾಜ್, ಶರಣಪ್ಪ ರೌಡಕುಂದಿ, ಕೆ.ಶ್ರೀಹರಿ, ನಾಗೇಶ್ವರಾವ್, ವಾಸು, ಟಿ.ಸರ್ವೇಶ್ವರಾವ್, ಶ್ರೀನಿವಾಸರಾವ್, ವೀರೇಶ ಈಡಿಗೇರ್, ಸೋಮನಾಥ್ ದೊಡ್ಡಮನಿ, ಕೊಲ್ಲಿ ಪೂರ್ಣ ಚಂದ್ರ, ಕೃಷ್ಣಾರಾವ್, ಚಂದ್ರಶೇಖರ ಪಲ್ಲೇದ, ನಾಗರಾಜ್ ಪಲ್ಲೇದ, ಸಂಗಪ್ಪ ದಳಪತಿ, ಗಣೇಶಗೌಡ, ಲಿಂಗಪ್ಪ ಹಿರೇಗೌಡ್ರು, ಆನಂದ ಪಲ್ಲೇದ್, ವೆಂಕೋಬ ಪತ್ತಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇತರರು ಇದ್ದರು.