ಹೇಮಾವತಿ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಅಕ್ರಮ: ಆರೋಪ

| Published : Feb 21 2024, 02:06 AM IST

ಸಾರಾಂಶ

ಈ ಹಿಂದೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದಾಖಲೆ ನೀಡಿ ಅವ್ಯವಹಾರದ ತನಿಖೆಗೆ ಒತ್ತಾಯಿಸಿದ್ದರು. ಕಳೆದ ವಾರ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಸದನದಲ್ಲಿ ನಾಲಾ ಆಧುನೀಕರಣ ಕಾಮಗಾರಿಯ ಅವ್ಯವಹಾರದ ಬಗ್ಗೆ ಧ್ವನಿಯೆತ್ತಿದ್ದರು. ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿ ಅವ್ಯವಹಾರದ ಪರಿಶೀಲನೆಗೆ ನಾಗಮೋಹನ್ ದಾಸ್ ಆಯೋಗ ರಚಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಹೇಮಾವತಿ ಜಲಾಶಯದ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಗಮನಕ್ಕೆ ತಾರದೆ ಪರಿಶೀಲನೆಗೆ ಬಂದಿದ್ದ ನಾಗಮೋಹನ್ ದಾಸ್ ವಿಚಾರಣಾ ಆಯೋಗದ ತಂಡಕ್ಕೆ ದೂರುದಾರರು ತಡೆಯೊಡ್ಡಿ ಪ್ರಶ್ನಿಸಿದ ಘಟನೆ ನಡೆದಿದೆ.

ಮುಖ್ಯನಾಲೆ ಆಧುನೀಕರಣ ಕಾಮಗಾರಿ ಸುಮಾರು ₹883 ಕೋಟಿ ವೆಚ್ಚದಲ್ಲಿ ನಡೆದಿದ್ದು, 2017-18 ನೇ ಸಾಲಿನಲ್ಲಿ ಆರಂಭವಾದರೂ ಗುತ್ತಿಗೆದಾರರು ಮತ್ತು ನೀರಾವರಿ ಇಲಾಖೆ ದಾಖಲೆಗಳ ಪ್ರಕಾರ ಈ ಕಾಮಗಾರಿ ಪೂರ್ಣಗೊಂಡಿದ್ದರೂ ನೈಜವಾಗಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ರೈತ ಮುಖಂಡರು ದೂರು ನೀಡಿದ್ದರು.

ನಾಲಾ ಆಧುನೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಲೈನಿಂಗ್‌ನ ಎರಡೂ ಬದಿಗಳಲ್ಲೂ ಕಬ್ಬಿಣದ ಕಾಂಕ್ರೀಟ್ ಮಾಡಿಲ್ಲ. ಅಲ್ಲಲ್ಲಿ ಸಿಮೆಂಟ್ ಲೈನಿಂಗ್ ಬಿದ್ದು ಹೋಗುತ್ತಿದೆ. ನಾಲೆ ಏರಿ ಮೇಲೆ ರಕ್ಷಣಾ ತಡೆ ಕಲ್ಲುಗಳ ಅಳವಡಿಸಿಲ್ಲ. ಸರ್ಕಾರಿ ದಾಖಲೆಯಲ್ಲಿಯೇ ಇಲ್ಲದ ಹಳ್ಳಿಯೊಂದರ ಹೆಸರಿನಲ್ಲಿ ನಾಲಾ ಕಾಮಗಾರಿಗೆ ಅಗತ್ಯವಾದ ಮಣ್ಣು ತೆಗೆದಿರುವುದಾಗಿ ದಾಖಲಿಸಲಾಗಿದೆ.

ಟಿ.ನರಸೀಪುರದ ಬಳಿ ಕಾವೇರಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದ್ದರೂ ಅಲ್ಲಿಂದ ಮರಳು ತರಲಾಗಿದೆ. ಸದರಿ ಕಾಮಗಾರಿಯಲ್ಲಿ ಸುಮಾರು ₹500 ಕೋಟಿ ನಷ್ಟು ಸರ್ಕಾರಿ ಹಣ ದುರುಪಯೋಗ ಸೇರಿದಂತೆ ಹಲವು ಲೋಪದೋಷಗಳನ್ನು ಪತ್ತೆಹಚ್ಚಿ ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗೇಗೌಡ ನೇತೃತ್ವದಲ್ಲಿ ನಾಲಾ ಆಧುನೀಕರಣ ಕಾಮಗಾರಿ ಅವ್ಯವಹಾರದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದರು.

ನಾಲಾ ಕಾಮಗಾರಿ ಹಗರಣದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು ಲೋಕಾಯುಕ್ತ ತಾಂತ್ರಿಕ ತಜ್ಞರು ಕಾಮಗಾರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿಂದೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದಾಖಲೆ ನೀಡಿ ಅವ್ಯವಹಾರದ ತನಿಖೆಗೆ ಒತ್ತಾಯಿಸಿದ್ದರು. ಕಳೆದ ವಾರ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಸದನದಲ್ಲಿ ನಾಲಾ ಆಧುನೀಕರಣ ಕಾಮಗಾರಿಯ ಅವ್ಯವಹಾರದ ಬಗ್ಗೆ ಧ್ವನಿಯೆತ್ತಿದ್ದರು. ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿ ಅವ್ಯವಹಾರದ ಪರಿಶೀಲನೆಗೆ ನಾಗಮೋಹನ್ ದಾಸ್ ಆಯೋಗ ರಚಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ತಂಡ ಯಾವುದೇ ಪೂರ್ವ ಮಾಹಿತಿಯಿಲ್ಲದೆ ಸೋಮುವಾರ ನಾಲಾ ಏರಿ ಮೇಲೆ ಸಂಚರಿಸಿ ಕಾಮಗಾರಿಯ ಪರಿವೀಕ್ಷಣೆಗೆ ಮುಂದಾಗಿತ್ತು.

ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸದೆ ನೆರೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಪ್ರವಾಸಿ ಮಂದಿರದಲ್ಲಿ ತನಿಖಾ ತಂಡ ಸೇರಿರುವುದನ್ನು ಪತ್ತೆಹಚ್ಚಿದ ದೂರುದಾರ ಪಿ.ಬಿ.ಮಂಚನಹಳ್ಳಿ ನಾಗೇಗೌಡ ನೇತೃತ್ವದ ತಂಡ ಶ್ರವಣಬೆಳಗೊಳಕ್ಕೆ ಹೋಗಿ ತನಿಖಾ ಆಯೋಗವನ್ನು ಕಾಣಲು ಪ್ರಯತ್ನಿಸಿತು.

ಆದರೆ, ಇವರಿಗೆ ತನಿಖಾ ತಂಡ ಎಲ್ಲಿಗೆ ಹೋಗಿದೆ ಎನ್ನುವುದರ ಮಾಹಿತಿ ದೊರಕಲಿಲ್ಲ. ಅಂತಿಮವಾಗಿ ಸೋಮವಾರ ಸಂಜೆ ವೇಳೆಗೆ ತನಿಖಾ ತಂಡ ತಾಲೂಕಿನ ಅಗ್ರಹಾರಬಾಚಹಳ್ಳಿ ಕೆರೆಕೋಡಿಯ ಬಳಿ ಇರುವುದನ್ನು ಪತ್ತೆಹಚ್ಚಿದ ದೂರುದಾರರ ತಂಡ ಯಾವುದೇ ಪೂರ್ವ ಸೂಚನೆಯಿಲ್ಲದೆ ಮತ್ತು ದೂರುದಾರರ ಗಮನಕ್ಕೆ ಬರದಂತೆ ನಾಲಾ ಕಾಮಗಾರಿಯ ಪರಿವೀಕ್ಷಣೆಗೆ ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ನಾನು ನಾಲಾ ಅವ್ಯವಹಾರದ ಪರಿಶೀಲನೆಗೆ ಬಂದಿಲ್ಲ. ಅನ್ಯ ದೂರಿನ ನಿಮಿತ್ತ ಪರಿಶೀಲನೆಗೆ ಬಂದಿದ್ದೇನೆ ಎಂದು ನಾಗಮೋಹನ್ ದಾಸ್ ಆಯೋಗದ ತಾಂತ್ರಿಕ ತಜ್ಞ ಕೆ.ಬಿ.ದೇವರಾಜು ಸ್ಪಷ್ಟನೆ ನೀಡಿದರು. ತಜ್ಞರ ಮೌಖಿಕ ಸ್ಪಷ್ಟಣೆಗೆ ಒಪ್ಪದ ದೂರುದಾರರು ತಾವು ಸರಪಳಿ 72ರಿಂದ ಆರಂಭವಾಗುವ ನಾಲಾ ಕಾಮಗಾರಿಯ ಪರಿಶೀಲನೆಗೆ ಬಂದಿಲ್ಲ ಎನ್ನುವುದನ್ನು ಲಿಖಿತ ರೂಪದಲ್ಲಿ ನೀಡಿ ಎಂದು ಪಟ್ಟ ಹಿಡಿದರು.

ಆಗ ಮಧ್ಯೆ ಪ್ರವೇಶಿಸಿದ ಮುಖ್ಯ ಎಂಜಿನಿಯರ್ ಎಂ.ಮಂಜುನಾಥ್ ಮತ್ತು ದೂರುದಾರರ ತಂಡದ ಸದಸ್ಯರ ನಡುವೆ ವಾಕ್ ಸಮರ ನಡೆಯಿತು. ಅಂತಿಮವಾಗಿ ಎಲ್ಲಾ ಘಟನಾವಳಿಗಳನ್ನು ತಮ್ಮ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ ದೂರುದಾರರ ತಂಡದವರು ನಾವು ಇಂದು ನಾಲಾ ಆಧುನೀಕರಣ ಅವ್ಯವಹಾರದ ಕಾಮಗಾರಿ ಪರಿಶೀಲನೆಗೆ ಬಂದಿಲ್ಲ. ಮತ್ತೊಮ್ಮೆ ನಿಮ್ಮ ಗಮನಕ್ಕೆ ತಂದು ಪರಿಶೀಲನೆಗೆ ಬರುತ್ತೇವೆ ಎನ್ನುವ ವಾಯ್ಸ್ ರೆಕಾರ್ಡ್ ಹೇಳಿಕೆ ಪಡೆದು ಹಿಂತಿರುಗಿದರು.

ತನಿಖಾ ತಂಡದ ಹಿರಿಯ ತಾಂತ್ರಿಕ ತಜ್ಞ ಕೆ.ಬಿ.ದೇವರಾಜು, ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಎಂ.ಮಂಜುನಾಥ್, ಕೆ.ಆರ್.ಪೇಟೆ ಕಾವೇರಿ ನೀರಾವರಿ ನಿಗಮದ ಎಚ್.ಎಲ್.ಬಿ.ಸಿ ನಂ.೦3 ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಿಝರ್ ಅಹಮದ್ ಸೇರಿದಂತೆ ನೀರಾವರಿ ಇಲಾಖೆಯ ಎಂಜಿಯರುಗಳು, ದೂರುದಾರರಾದ ನಾಗೇಗೌಡ, ಜಿ.ಆರ್.ಜಯಣ್ಣ, ರೈತ ಮುಖಂಡರಾದ ಅರುಣಕುಮಾರ್, ರವಿ, ಯೋಗೆಶ್ ರಾಮೇಗೌಡ, ಶಂಕರ್ ಸೇರಿದಂತೆ ಹಲವರಿದ್ದರು.