ಭಾರತದಲ್ಲಿರುವ ಪ್ರಜಾಪ್ರಭುತ್ವದಂತಹ ವಿಶಿಷ್ಟ ವವಸ್ಥೆಯು ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದಂತಹ ಸೌಹಾರ್ದಯುತ ಭದ್ರ ಬುನಾದಿ ಮೇಲೆ ನಿಂತಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಭಾರತದಲ್ಲಿರುವ ಪ್ರಜಾಪ್ರಭುತ್ವದಂತಹ ವಿಶಿಷ್ಟ ವವಸ್ಥೆಯು ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದಂತಹ ಸೌಹಾರ್ದಯುತ ಭದ್ರ ಬುನಾದಿ ಮೇಲೆ ನಿಂತಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು ಮತ್ತು ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ನಂತರ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಭಾರತದ ಶ್ರೇಷ್ಠ ಸಂವಿಧಾನ ರಚನೆಯಾಗಿದೆ. ಮೂಲಭೂತ ಹಕ್ಕುಗಳ ಜತೆಗೆ ನಾಗರಿಕರು ತಮ್ಮ ಕರ್ತವ್ಯಗಳ ಅರಿತುಕೊಳ್ಳಬೇಕು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ಸುಶಿಕ್ಷಿತರಾಗಿ, ಸಂಘಟಿತರಾಗಬೇಕು. ನಂತರ ಸಮಾಜ ಸೇವೆಯಲ್ಲಿ ತೊಡಗಬೇಕು. ಶಿಕ್ಷಣದ ಮೂಲಕ ತಮ್ಮ ನಡವಳಿಕೆಗಳನ್ನು ನಾಗರಿಕರು ಸುಧಾರಿಸಿಕೊಳ್ಳಬೇಕು ಎಂದರು.

ವಿಶ್ವ ಸಂಸ್ಥೆ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ, ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವ ಬಲಪಡಿಸಲು, ಅದರ ಮೌಲ್ಯಗಳನ್ನು, ತತ್ವಗಳನ್ನು ಎತ್ತಿ ಹಿಡಿಯಲು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಘೋಷಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ ಸಂವಿಧಾನದಲ್ಲಿ ಭ್ರಾತೃತ್ವದಂತಹ ಆದರ್ಶಗಳು ಪೀಠಿಕೆಯ ಮುಖ್ಯ ಭಾಗವಾಗಿವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಮುಂದಾದಾಗ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೆಚ್ಚಿಸಿದಂತಾಗುತ್ತದೆ. ಸಂವಿಧಾನದ ಸದಾಶಯಗಳನ್ನು ಸಂಪೂರ್ಣವಾಗಿ ತಿಳಿದು, ಆದರ್ಶ ಸಮಾಜ ರೂಪಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸರ್ವೋದಯ ಶಿವಪುತ್ರ ಅವರು ಭಗವಾನ್ ಬುದ್ಧ, ಶ್ರೀ ಬಸವಣ್ಣನವರ ಕಾಲಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಮಾನವೀಯತೆ ಹಾಗೂ ಸಮಾನ ಸಮಾಜಕ್ಕಾಗಿ ಅವರು ಶ್ರಮಿಸಿದರು, ವೈಚಾರಿಕ ಕ್ರಾಂತಿ ಮಾಡಿದರು. ಹಾಗೂ ಆಧುನಿಕ ಯುಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಗಳು ಸರ್ವಕಾಲಿಕ ಸತ್ಯವಾಗಿವೆ. ಅವರು ಶ್ರೇಷ್ಠ ಸಂವಿಧಾನ ರಚಿಸಿ ಮೂಲಭೂತ ಹಕ್ಕು, ಕರ್ತವ್ಯ ಜವಾಬ್ದಾರಿ ನೀಡಿದರು. ಶಾಸಕಾಂಗ,ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿವೆ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೆನ್ನಬಸವ ಅವರು ಮಾತನಾಡಿ, ಯುವಕರಿಗೆ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಿಳಿಹೇಳಲು ಯುವ ಸಂಸತ್ತು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಎಂದು ಹೇಳಿದರು.

ಕುಮಾರಿ ಅರ್ಪಿತಾ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರೆಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಡಿಡಿಪಿಐ ಚನ್ನಬಸಪ್ಪ ಮುಧೋಳ ಉಪಸ್ಥಿತರಿದ್ದರು. ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ಭಾಗ್ಯಶ್ರೀ ಜೈಕಾರ, ಶಂಭುಲಿಂಗ್ ಪಾಟೀಲ್ ವಂದಿಸಿದರು. ನಿಲಯ ಪಾಲಕ ದೇವೇಂದ್ರಪ್ಪ ವಂದಿಸಿದರು.