ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಕೆಲಸ ಮಾಡುವುದೇ ಪತ್ರಿಕಾ ಧರ್ಮ. ಅದೇ ಸಂವಿಧಾನದ ಆಶಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಖಾದ್ರಿ ಶಾಮಣ್ಣ ಟ್ರಸ್ಟ್‌ನಿಂದ ಶನಿವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಉದಯ್ ಕುಮಾರ್ ಅವರಿಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಪತ್ರಿಕೋದ್ಯಮ ಬಹಳ ಮುಖ್ಯವಾಗಿದ್ದು, ಅದು ಪ್ರಜಾಪ್ರಭುತ್ವದ ಜೀವಾಳ ಎಂದರು.

ಸಂವಿಧಾನ ಪತ್ರಕರ್ತರಿಗೆ ಸ್ವಾತಂತ್ರ್ಯ ಕೊಟ್ಟಿದೆ. ಆ ಸ್ವಾತಂತ್ರ್ಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ದಾರಿ ಬದಲಾಗುತ್ತಿದೆ. ಕೆಲ ಪತ್ರಿಕೋದ್ಯಮ ಸಂಸ್ಥೆಗಳು ಅದರ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಖಾದ್ರಿ ಶಾಮಣ್ಣನವರು ಇದ್ದ ಕಾಲದಲ್ಲಿ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದರು. ಎಷ್ಟೇ ಗಂಭೀರ ವಿಷಯವಾದರೂ ಸರಳವಾಗಿ ಬರೆಯುವ ಕಲೆ ಅವರದ್ದಾಗಿತ್ತು. ಅದರಿಂದಾಗಿ ಜನರಿಗೆ ವಿಷಯ ಬೇಗ ತಲುಪುತ್ತಿತ್ತು. ಅವರು ರಾಜಕಾರಣಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜತೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ, ಸಂವಿಧಾನದ ಮೇಲೆ ಬದ್ಧತೆ ಇಟ್ಟುಕೊಂಡಿದ್ದ ವ್ಯಕಿಯಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಗಾಂಧೀಜಿ, ಜಯಪ್ರಕಾಶ್‌ ನಾರಾಯಣ, ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾಗಿದ್ದ ಖಾದ್ರಿ ಶಾಮಣ್ಣ ಅವರು ಹೋರಾಟಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಎರಡು ಬಾರಿ, ಸ್ವಾತಂತ್ರ್ಯ ಪಡೆದ ನಂತರ ಮೂರು ಬಾರಿ ಜೈಲು ಸೇರಿದ್ದರು. ವ್ಯಕ್ತಿಗೆ ಮಾತ್ರವಲ್ಲ, ಚಳವಳಿಗಳಿಗೂ ಚಾರಿತ್ರ್ಯ ಇರಬೇಕು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಹೇಳಿದರು.

ಅಸ್ಸಾಂ ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಸಮ ಕುಲಪತಿ ಕೆ.ವಿ.ನಾಗರಾಜ್‌ ಮಾತನಾಡಿ, ಸಾಮಾಜಿಕ ಜಾವಬ್ದಾರಿ ಇಲ್ಲದ ಯೂಟ್ಯೂಬ್‌ ಜರ್ನಲಿಸಂ, ಸಿಟಿಜನ್‌ ಜರ್ನಲಿಸಂ ಅನ್ನು ನಿಷೇಧಿಸಬೇಕು. ಬದ್ಧತೆ ಇಲ್ಲದ ಸಾಮಾಜಿಕ ಜಾಲತಾಣದ ಮಾಧ್ಯಮಗಳಿಗೆ ಪ್ರೋತ್ಸಾಹ ನೀಡಬಾರದು ಎಂದರು.

ಪ್ರಶಸ್ತಿ ಸ್ವೀಕರಿಸಿದ ಉದಯಕುಮಾರ್ ಮಾತನಾಡಿ, ಕನ್ನಡವೇ ಅರ್ಥವಾಗದ ಊರಿನಿಂದ ಬಂದ ನನ್ನಲ್ಲಿ ಕನ್ನಡದ ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂಬುದು ಗೊತ್ತಿಲ್ಲ. ನಾನು ಬೆಂಗಳೂರಿಗೆ ಬರುವವರೆಗೆ ರಾಜಕುಮಾರ್‌ ಎಂಬ ಮೇರುನಟ ಇದ್ದಾರೆ ಎಂಬುದೂ ಗೊತ್ತಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ವಸತಿ ನಿಲಯಗಳಲ್ಲಿ ಇದ್ದುಕೊಂಡು ಎಲ್ಲವನ್ನೂ ಕಲಿತೆ ಎಂದು ಹಿಂದಿನ ದಿನಗಳನ್ನು ಸ್ಮರಿಸಿದರು.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಎಚ್‌.ಆರ್‌. ಶ್ರೀಶ ಉಪಸ್ಥಿತರಿದ್ದರು.