ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಸ್ತುತ ಸಮಾಜದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ಪ್ರಮುಖ ಗಂಭೀರ ಸಮಸ್ಯೆಯಾಗಿದೆ. ಯುವ ಜನತೆಯನ್ನು ಗುರಿಯಾಗಿಸಿಕೊಂಡು ಹರಡುತ್ತಿರುವ ಈ ಸಮಸ್ಯೆಯ ಜಾಲವು ವ್ಯಕ್ತಿಯ ಆರೋಗ್ಯ ಹಾಗೂ ನೆಮ್ಮದಿ ಮತ್ತು ಸಮಾಜದ ಆರೋಗ್ಯವನ್ನು ಹದಗೆಡಿಸುತ್ತಿದೆ. ಇಂತಹ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪೊಲೀಸ್ ಇಲಾಖೆಯ ಜೊತೆಗೆ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಿದೆ ಎಂದು ಶಾಸಕ ಸಚಿವ ದರ್ಶನಾಪುರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶೋರಾಪುರ ಉಪವಿಭಾಗ ಮತ್ತು ಶಹಾಪುರ ಗ್ರಾಮಾಂತರ ವೃತ್ತ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅರಿವು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.

ಪೊಲೀಸ್ ಅಧಿಕ್ಷಕ ಪೃಥ್ವಿಕ್ ಶಂಕರ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಮಾಡುವ ಜಾಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡು ಅದನ್ನು ತಡೆಗಟ್ಟಲು ಎಲ್ಲಾ ರೀತಿಯಿಂದ ಶ್ರಮಿಸುತ್ತಿದೆ. ಮಾದಕ ವಸ್ತುಗಳ ದುರುಪಯೋಗ ಅಥವಾ ಸಾಗಾಣಿಕೆ ನಡೆಯುತ್ತಿರುದನ್ನು ಕಂಡು ಬಂದರೆ ಪೊಲೀಸ್ ಇಲಾಖೆ ಆರಂಭಿಸಿರುವ ಆ್ಯಪ್‍ಗೆ ಮಾಹಿತಿ ನೀಡಿದರೆ ಈ ಸಮಸ್ಯೆಯನ್ನು ಬಹಳಷ್ಟು ನಿಯಂತ್ರಿಸಬಹುದಾಗಿದೆ ಎಂದರು.

ವೈದ್ಯಾಧಿಕಾರಿ ಡಾ. ಧನರಾಜ ಅವರು ಮಾದಕ ವಸ್ತುಗಳ ಸೇವನೆಯ ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.


ಕೃಷಿ ಕಾಲೇಜಿನ ಡೀನ್ ಪ್ರಕಾಶ ಕುಚನೂರ, ಪ್ರಾಂಶುಪಾಲ ದೇವೆಂದ್ರಪ್ಪ ಮಡಿವಾಳಕರ್, ಸಿ.ಪಿ.ಐ. ದೀಪಕ್ ಭೂಸರಡ್ಡಿ, ಗೋಗಿ ಪಿ.ಎಸ್.ಐ. ಶಿವರಾಜ ಪಾಟೀಲ, ಭೀಗುಡಿ ಪಿ.ಎಸ್.ಐ ದೇವೆಂದ್ರರಡ್ಡಿ ನವಲಿ, ಶಿಕ್ಷಕಿ ಕಾವೇರಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.