ಶಿಕ್ಷಣದಿಂದ ಮಾತ್ರ ಅನಿಷ್ಟ ಪದ್ದತಿ ನಿರ್ಮೂಲನೆ: ಶರಣಪ್ಪ

| Published : Feb 21 2025, 11:47 PM IST

ಸಾರಾಂಶ

ಅನಿಷ್ಟ ಪದ್ಧತಿ ಮಟ್ಟ ಹಾಕಲು ಸರ್ಕಾರ ಕ್ರಮಕೈಗೊಳ್ಳಲಾಗಿದೆ. ಅನುಷ್ಠಾನಗೊಳ್ಳಲು ಸಹಕಾರ ನೀಡಬೇಕು. ದೇವದಾಸಿಯರ ಮಕ್ಕಳಿಗೆ ಮದುವೆ ಸಹಾಯಕ್ಕಾಗಿ ೧೬೦ ಅರ್ಜಿಗಳಿಗೆ ಅನುದಾನ ಕೊರತೆಯಿಂದ ಇನ್ನೂ ಹಲವರಿಗೆ ಅನುದಾನ ನೀಡಬೇಕಾಗಿದೆ.

ಕೊಪ್ಪಳ:

ದೇವದಾಸಿ ಸೇರಿದಂತೆ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಹೇಳಿದರು.

ನಗರದ ಕೃಷಿ ವಿಸ್ತರಣಾ ಕೇಂದ್ರದ ಸಭಾ ಭವನದಲ್ಲಿ ಚಿಲ್ಡ್ರನ್ ಆಪ್ ಇಂಡಿಯಾ ಫೌಂಡೇಶನ್‌ನಿಂದ ದೇವದಾಸಿ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರಕ್ಕಾಗಿ ಮಾಧ್ಯಮದವರೊಂದಿಗೆ ಜಾಗೃತಿ ಸಭೆ ಹಾಗೂ ಸಂವಾದ ಸಭೆಯಲ್ಲಿ ಮಾತನಾಡಿದರು.

ಅನಿಷ್ಟ ಪದ್ಧತಿ ಮಟ್ಟ ಹಾಕಲು ಸರ್ಕಾರ ಕ್ರಮಕೈಗೊಳ್ಳಲಾಗಿದೆ. ಅನುಷ್ಠಾನಗೊಳ್ಳಲು ಸಹಕಾರ ನೀಡಬೇಕು. ದೇವದಾಸಿಯರ ಮಕ್ಕಳಿಗೆ ಮದುವೆ ಸಹಾಯಕ್ಕಾಗಿ ೧೬೦ ಅರ್ಜಿಗಳಿಗೆ ಅನುದಾನ ಕೊರತೆಯಿಂದ ಇನ್ನೂ ಹಲವರಿಗೆ ಅನುದಾನ ನೀಡಬೇಕಾಗಿದೆ ಎಂದರು.

ದೇವದಾಸಿ ಪುನರ್ವಸತಿ ಯೋಜನೆಯ ಅಧಿಕಾರಿ ಪುಷ್ಪಾ ಏಳುಬಾವಿ ಮಾತನಾಡಿ, ಉತ್ತರ ಕರ್ನಾಟಕದ ೧೫ ಜಿಲ್ಲೆಗಳಲ್ಲಿ ೪೬,೬೬೦ ದೇವದಾಸಿಯರು ಬಲಿಯಾಗಿದ್ದಾರೆ. ಅವರಿಗೆ ಪುನರ್ವಸತಿ ಯೋಜನೆ ಜಾರಿ ಮಾಡಿದೆ. ಸರ್ಕಾರದಿಂದ ದೇವದಾಸಿಯರಿಗೆ ಸೌಲಭ್ಯ ನೀಡುತ್ತಿದೆ. ಕೊಪ್ಪಳ ಜಿಲ್ಲೆಯನ್ನು ದೇವದಾಸಿ ಮುಕ್ತ ಜಿಲ್ಲೆಯನ್ನಾಗಿಸುವ ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ೨,೯೫೩ ಜನ ಮಾಜಿ ದೇವದಾಸಿಯರಿದ್ದಾರೆ ಎಂದು ಮಾಹಿತಿ ನೀಡಿದರು.ಗುಡ್ ಸಂಸ್ಥೆಯ ಸರೋಜಾ ಪ್ರಾಸ್ತಾವಿಕ ಮಾತನಾಡಿ, ದೇವದಾಸಿ ಮಹಿಳೆಯರ ಮರುಸಮೀಕ್ಷೆ ಮಾಡಬೇಕು. ದೇವದಾಸಿಯರ ಸಮಸ್ಯೆ ಬಗೆಹರಿಸಬೇಕು. ಉನ್ನತ ಶಿಕ್ಷಣ ಪಡೆಯುವ ಮಾಜಿ ದೇವದಾಸಿಯರ ಮಕ್ಕಳಿಗೆ ತಂದೆ ಹೆಸರು ಹಾಕುವುದು ಐಚ್ಛಿಕವಾಗಿರಬೇಕು. ಅವರಿಗೆ ಬ್ಯಾಂಕ್ ಖಾತೆಯಲ್ಲಿ ಗಂಡನ ಹೆಸರು ಕೇಳುತ್ತಾರೆ. ಇದನ್ನು ಬಿಡಬೇಕು. ದೇವದಾಸಿ ಪದ್ಧತಿ ಇಲ್ಲಿಗೆ ನಿಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಶೋಭಾ ಸ್ವಾಗತಿಸಿದರು. ಗಂಗಮ್ಮ ಹಕ್ಕೊತ್ತಾಯ ಮಂಡಿಸಿದರು. ಪತ್ರಕರ್ತ ರವೀಂದ್ರ ವಿ.ಕೆ., ಪರಶುರಾಮ್, ಹನುಮಂತಪ್ಪ ಹಳ್ಳಿಕೇರಿ, ಬಸವರಾಜ ಕರುಗಲ್ ಸೇರಿ ಉಪಸ್ಥಿತರಿದ್ದರು.