ಸಮಗ್ರ ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ನಿರ್ಮೂಲನೆ: ಜಕ್ಕನಗೌಡ್ರ

| Published : Feb 21 2024, 02:00 AM IST

ಸಾರಾಂಶ

ಯುವಕರು ಒಳ್ಳೆಯ ನಾಗರಿಕರಾಗಿ ಮುಂದಿನ ಭವಿಷ್ಯ ನಿರ್ಮಾಣದ ಜವಾಬ್ದಾರಿ ಇರುವುದರಿಂದ ದುಶ್ಚಟಗಳಿಗೆ ಬಲಿಯಾಗದೆ, ಸರಿಯಾದ ಶಿಕ್ಷಣ ಪಡೆದು ಒಳ್ಳೆಯ ಪ್ರಜೆಗಳಾಗಿ ದೇಶದ ಭದ್ರ ಬುನಾದಿ ಹಾಕಬೇಕು ಎಂದು ಪಿಎಸ್‌ಐ ಎಸ್‌.ಎಸ್‌. ಜಕ್ಕನಗೌಡ್ರ ಹೇಳಿದರು.

ಹುಬ್ಬಳ್ಳಿ: ಸಮಗ್ರ ಶಿಕ್ಷಣದಿಂದ ಮಾತ್ರ ಜೀತ ಪದ್ಧತಿ ನಿರ್ಮೂಲನೆ ಸಾಧ್ಯವಿದ್ದು, ಈ ಕುರಿತು ಸಾರ್ವಜನಿಕರು ಅರಿವು ಹೊಂದಬೇಕು ಎಂದು ಪಿಎಸ್‌ಐ ಎಸ್‌.ಎಸ್‌. ಜಕ್ಕನಗೌಡ್ರ ಹೇಳಿದರು.

ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಯುವಕರು ಒಳ್ಳೆಯ ನಾಗರಿಕರಾಗಿ ಮುಂದಿನ ಭವಿಷ್ಯ ನಿರ್ಮಾಣದ ಜವಾಬ್ದಾರಿ ಇರುವುದರಿಂದ ದುಶ್ಚಟಗಳಿಗೆ ಬಲಿಯಾಗದೆ, ಸರಿಯಾದ ಶಿಕ್ಷಣ ಪಡೆದು ಒಳ್ಳೆಯ ಪ್ರಜೆಗಳಾಗಿ ದೇಶದ ಭದ್ರ ಬುನಾದಿ ಹಾಕಬೇಕು. ಪಾಲಕರು ಯಾವುದೇ ಕಾರಣಕ್ಕೆ ಜೀತ ಪದ್ದತಿಯಂಥವುಗಳಿಗೆ ತಮ್ಮ ಮತ್ತು ತಮ್ಮ ಮಕ್ಕಳ ಜೀವನ ಬಲಿಕೊಡಬಾರದು ಎಂದರು.

ಸ್ಥಳೀಯ ಮುಖಂಡ ಮಂಜುನಾಥ ಕೊಂಡಪಲ್ಲಿ ಮಾತನಾಡಿ, ಜೀತಪದ್ಧತಿಯು ಇಂದಿಗೂ ಹಳ್ಳಿಗಳಲ್ಲಿ ಮತ್ತು ನಗರಪ್ರದೇಶಗಳಲ್ಲಿ ಮುಖ್ಯವಾಗಿ ಹೋಟೆಲ್ ಉದ್ಯಮಗಳಲ್ಲಿ ಜೀವಂತವಾಗಿರುವುದು ಚಿಂತಾಜನಕ ವಿಷಯವಾಗಿದೆ. ಆದರೆ,ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಿರಂತರ ಶ್ರಮ ಪಡುತ್ತಿರುವ ಪೋಲಿಸ್ ಇಲಾಖೆಯ ಈ ಸಮಾಜ ಪರ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ಚಾಮುಂಡೇಶ್ವರಿ ನಗರದ ಅಧ್ಯಕ್ಷ ಪರಶುರಾಮ ಮಲ್ಯಾಳ, ಅಶೋಕ ನಗರ ಠಾಣೆಯ ಎಎಸ್‌ಐ ಎಂ.ಕೆ. ದೇಸಾಯಿ, ಪೇದೆ ಎಸ್.ಎಚ್. ಪಾಟೀಲ್, ಬೀರಣ್ಣ ನಾಟಿಕಾರ್, ಶಂಭು ಈರೇಶಣ್ಣವರ ಇದ್ದರು.