ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ವಿರುದ್ಧ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಸೋಮವಾರ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೂ ಹೋಗದೆ ಸಡ್ಡು ಹೊಡೆದಿದ್ದಾರೆ. ನಿರೀಕ್ಷೆಯಂತೆ ಗೈರು ಹಾಜರಾದ ಅವರು, ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು.
ಸೋಮವಾರ ಬೆಳಗ್ಗೆಯಿಂದಲೇ ಭದ್ರಾವತಿಯ ಬಿಳಕಿ ಮಠ, ಗೋಣಿಬೀಡು, ಹಿರೇಮಾಗಡಿ, ಮೂಡಿ, ಶಾಂತಪುರ ಮಠ, ಸೊರಬದ ಜಡೆ ಹಿರೇಮಠ, ಹೊಸನಗರದ ಮೂಲೆಗದ್ದೆ, ಹಾರ್ನಳ್ಳಿ ಚೌಕಿಮಠ, ಹುಂಚ, ಶಿಕಾರಿಪುರದ ಸಾಲೂರು, ಶಿರಾಳಕೊಪ್ಪದ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಸಾಧು ಸಂತರು, ಪೀಠಾಧೀಶರನ್ನು ಭೇಟಿ ಮಾಡಿದರು. ನಡೆದ ಘಟನೆ ಮತ್ತು ತಾವು ಕೈಗೊಂಡ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತಮಗೆ ಆಶೀರ್ವದಿಸುವಂತೆ ಬೇಡಿಕೊಂಡರು.
ಈ ಸಂದರ್ಭದಲ್ಲಿಯೇ ಸಂಘ ಪರಿವಾರದ ಪ್ರಮುಖರು, ಅಯೋಧ್ಯೆ ರಾಮಜನ್ಮಭೂಮಿ ಜವಾಬ್ದಾರಿ ಹೊತ್ತಿರುವ ಗೋಪಾಲ್ ನಾಗರಕಟ್ಟೆ ಅವರು ದೂರವಾಣಿ ಕರೆ ಮಾಡಿ, ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದು, ಈಶ್ವರಪ್ಪ ತಿರಸ್ಕರಿಸಿದ್ದಾರೆ.
ಪ್ರಧಾನಿ ಮೋದಿಯವರು ಆ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಮತ ಯಾಚಿಸುತ್ತಾರೆ. ಆ ವೇಳೆ ನಾನು ಹೇಗೆ ಅಲ್ಲಿ ಕೂರುವುದು? ಅನಗತ್ಯ ಗೊಂದಲ ಸೃಷ್ಟಿಯಾಗುವುದು ಬೇಡ ಎಂದ ಅವರು, ನಾನು ಗೆದ್ದ ಬಳಿಕ ನಿಮ್ಮ ಬಳಿಯೇ ಬರುತ್ತೇನೆ, ಪ್ರಧಾನಿಯವರನ್ನು ಕೂಡ ಆಮೇಲೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.