ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಗೈರು ಹಾಜರಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿರುವ ಕೆ.ಎಸ್‌. ಈಶ್ವರಪ್ಪ ಸೋಮವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿ, ಅಲ್ಲಿನ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಗೈರು ಹಾಜರಾದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿರುವ ಕೆ.ಎಸ್‌. ಈಶ್ವರಪ್ಪ ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿ, ಅಲ್ಲಿನ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು. 

ಸೋಮವಾರ ಬೆಳಗ್ಗೆಯಿಂದಲೆ ಭದ್ರಾವತಿಯ ಬಿಳಕಿ ಮಠ, ಗೋಣಿಬೀಡು, ಹಿರೇಮಾಗಡಿ, ಮೂಡಿ, ಶಾಂತಪುರ ಮಠ, ಸೊರಬದ ಜಡೆ ಹಿರೇಮಠ, ಹೊಸನಗರದ ಮೂಲೆಗದ್ದೆ, ಹಾರ್ನಳ್ಳಿ ಚೌಕಿಮಠ, ಹುಂಚ, ಶಿಕಾರಿಪುರದ ಸಾಲೂರು, ಶಿರಾಳಕೊಪ್ಪದ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಸಾಧು ಸಂತರು, ಪೀಠಾಧೀಶರನ್ನು ಭೇಟಿ ಮಾಡಿದರು.

ನಡೆದ ಘಟನೆ ಮತ್ತು ತಾವು ಕೈಗೊಂಡ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತಮಗೆ ಆಶೀರ್ವದಿಸುವಂತೆ ಬೇಡಿಕೊಂಡರು.

ಮಠಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಸಂಘ ಪರಿವಾರದ ಪ್ರಮುಖರಾದ ಗೋಪಾಲ್‌ ಜೀ ಅವರು ಅಯೋಧ್ಯೆಯಿಂದ ದೂರವಾಣಿ ಕರೆ ಮಾಡಿದರು. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಈಶ್ವರಪ್ಪನವರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಈಶ್ವರಪ್ಪ ಅವರು ಆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಮತ ಯಾಚಿಸುತ್ತಾರೆ. ಆ ಸಂದರ್ಭದಲ್ಲಿ ನಾನು ಹೇಗೆ ಅಲ್ಲಿ ಕೂರುವುದು? ಅನಗತ್ಯ ಗೊಂದಲ ಸೃಷ್ಟಿಯಾಗುವುದು ಎಂದು ಪ್ರಶ್ನಿಸಿದರು.

ನಾನು ಗೆದ್ದು ಬಳಿಕ ನಿಮ್ಮ ಬಳಿಯೇ ಬರುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ಆಮೇಲೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಇದಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ನಾನು ಸಮಾವೇಶದಲ್ಲಿ ಭಾಗವಹಿಸುವುದು ಸರಿಯಲ್ಲ. ನಾನು ನನ್ನ ಪುತ್ರನಿಗಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷ ಸರಿಪಡಿಸಲು ಈ ಸ್ಪರ್ಧೆ. ಈಗ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್‌ ನೀಡುತ್ತೇನೆ ಎಂದರೂ ಅದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ ಯಡಿಯೂರಪ್ಪ, ಈಗ ವಿಜಯೇಂದ್ರ‌ಗೆ ಜೈಕಾರ ಹಾಕುತ್ತಾ ಇರಬೇಕೇನು. ವಿಜಯೇಂದ್ರ‌ ಮುಖ್ಯಮಂತ್ರಿ ಆಗುವುದನ್ನು ನಾವು ನೋಡುತ್ತಾ ಕುಳಿತಿರಬೇಕೇನು? ಎಂದು ಈಶ್ವರಪ್ಪ ಪ್ರಶ್ನಿಸಿದರು.

- - - -ಪೋಟೋ:

ಭದ್ರಾವತಿಯ ಬಿಳಕಿ ಮಠಕ್ಕೆ ಭೇಟಿ ನೀಡಿದ ಕೆ. ಎಸ್‌. ಈಶ್ವರಪ್ಪ ಸಾಧು ಸಂತರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.