ರಾಮನಗರ ಹೆಸರು ಬದಲಾವಣೆಗೆ ಈಶ್ವರಪ್ಪ ಕಿಡಿ

| Published : Jul 30 2024, 12:40 AM IST

ಸಾರಾಂಶ

ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ, ಡಿಕೆಶಿಗೆ ದೆವ್ವ ಬಂದ ಹಾಗೆ ಆಗುತ್ತದೆ ಎಂದು ಈಶ್ವರಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಸ್ಲಿಂಮರನ್ನು ಸಂತೃಪ್ತಿಪಡಿಸಲು ರಾಮನಗರ ಹೆಸರು ಬದಲಾವಣೆ ಮಾಡ್ತಿದ್ದಾರೆ. ರಾಮ ಅನ್ನುವ ಹೆಸರಿದ್ದರೆ ಕಾಂಗ್ರೆಸ್‌ಗೆ ಏನು ಸಮಸ್ಯೆ. ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ, ಡಿಕೆಶಿಗೆ ದೆವ್ವ ಬಂದ ಹಾಗೆ ಆಗುತ್ತದೆ. ರಾಮನಗರದ ಹೆಸರು ರಾಮನಗರ ಅಂತಾನೆ ಇರಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಹಿಂದ ವರ್ಗಕ್ಕೆ ಓಟು ಕೊಡಿ ಒಳ್ಳೆಯ ಕೆಲಸ ಮಾಡುತ್ತೇವೆ ಎಂದಿತ್ತು. ಜನ ನಂಬಿ ಮತ ಹಾಕಿ ಗೆಲ್ಲಿಸಿದ್ದಾರೆ. ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ 312 ಕೋಟಿ ರು. ಹಣ ರದ್ದು ಮಾಡಿದ್ದಾರೆ. ಜುಲೈ 12 ರಂದು ಅನುದಾನ ವಾಪಸ್ ಪಡೆದಿದ್ದಾರೆ. ಎಸ್ಸಿ, ಎಸ್ಟಿ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ಗ್ಯಾರಂಟಿ ಯೋಜನೆಗೆ ಬಳಸಿದ್ದಾರೋ ಏನಕ್ಕೆ ಬಳಸಿದ್ದಾರೋ ಗೊತ್ತಿಲ್ಲ. ಎಸ್ಟಿ, ಎಸ್ಟಿ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ ಹಣವನ್ನು ಆ ಸಮುದಾಯಕ್ಕೆ ಕೊಡಬೇಕು. ಈ ಹಣ ವಾಪಸ್ ಕೊಟ್ಟರೆ ಆ ಸಮುದಾಯ ಉದ್ದಾರ ಆಗುತ್ತೆ. ರಾಜಕಾರಣಕ್ಕೆ ಹೇಳಿಕೆ ಕೊಟ್ಟರೆ ಏನು ಪ್ರಯೋಜನ ಇಲ್ಲ. ಆ ಸಮುದಾಯಕ್ಕೆ ಹಣ ಕೊಡಬೇಕು ಎಂದು ಹರಿಹಾಯ್ದರು.ಬಡವರಿಗೆ ಆಶ್ರಯ ಮನೆ ಕೊಡ್ತೀವಿ ಅಂದಿದ್ದು, ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದು ಮನೆ ಕೊಟ್ಟಿಲ್ಲ.

ವಸತಿ ಸಚಿವ ಜಮೀರ್ ಅಹಮ್ಮದ್ ಭೇಟಿ ಮಾಡಲು ಅವರ ಕಚೇರಿಗೆ ಹೋಗಿದ್ದೆ. ಸಚಿವರ ಭೇಟಿ ಮಾಡಲು ಅವರೇ ಸಮಯ ಕೊಟ್ಟಿದ್ದರು. ಸಮಯ ಕೊಟ್ಟಿದ್ದರೂ ಅಂತ ಕಚೇರಿಗೆ ಹೋಗಿದ್ದೆ. ಸಚಿವರು ಸಿಗಲಿಲ್ಲ, ವಿದೇಶಕ್ಕೆ ಹೋಗಿದ್ದಾರೆ ಅಂದ್ರು. ಅವರೇ ಭೇಟಿಗೆ ಸಮಯ ಕೊಟ್ಟು ತಪ್ಪಿಸಿಕೊಂಡರು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ:ಆಶ್ರಯ ಮನೆ ನಿರ್ಮಾಣದ ಬಗ್ಗೆ ಗಮನ ಕೊಡಲಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ. ಎರಡು ವರ್ಷದಿಂದ ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣ ಬಂದಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದನ್ನು ಸರಿಪಡಿಸಲು ಭರವಸೆ ನೀಡಿದ್ದಾರೆ. ಇನ್ನು ಮೂರು ಉಪ ಚುನಾವಣೆ ಬರುತ್ತಿವೆ. ಇಡೀ ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರೈತ ಸಂಪೂರ್ಣ ಸಂಕಷ್ಟದಲ್ಲಿ ಇದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡೋದ್ರಲ್ಲೇ ತಲ್ಲೀನ ಆಗಿದ್ದಾರೆ ಎಂದು ಆರೋಪಿಸಿದರು.ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ:ವಿಜಯೇಂದ್ರ ಹಗರಣ ಮಾಡಿದ್ದಾರೆ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ ಅಂತ ಡಿಕೆಶಿ ಹೇಳಿದ್ದಾರೆ. ನಿಮ್ಮ ಬಳಿ ಸರಕಾರ ಇದೆ. ಎಸ್‌ಐಟಿ ಇದೆ. ನಿಮ್ಮ ಬಳಿ ದಾಖಲೆ ಇದ್ದರೆ ಬಿಜೆಪಿ, ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣ ಎರಡನ್ನು ಸಿಬಿಐಗೆ ಕೊಡಿ. ಯಾರೇ ಹಗರಣ ಮಾಡಿದರೂ ಬಹಿರಂಗ ಆಗ್ತದೆ. ನಿಜಕ್ಕೂ ಇದು ನಿಮ್ಮ ಬ್ಯ್ಲಾಕ್ ಮೇಲ್ ತಂತ್ರ. ಯಾರೇ ಕಳ್ಳರಿದ್ದರೂ ಇವತ್ತಲ್ಲ ನಾಳೆ ಜೈಲಿಗೆ ಹೋಗಲೇಬೇಕು. ರಸ್ತೆಯಲ್ಲಿ ದಾಸರು ಮಾತನಾಡುವ ರೀತಿ ಭಂಡ ರೀತಿ ಹೇಳಿಕೆ ಕೊಡೋದು ಬೇಡ ವಾಗ್ದಾಳಿ ನಡೆಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ಶಂಕರ್ ಗನ್ನಿ, ಈ.ವಿಶ್ವಾಸ್,ಮಹಾಲಿಂಗಯ್ಯ ಶಾಸ್ತ್ರಿ ಸೇರಿದಂತೆ ಹಲವರಿದ್ದರು.

ಚಿಂತನಾಶೀಲರು ಸಿದ್ದರಾಮಯ್ಯರ ಚೇಲಾಗಳಾ?ಸಿಎಂ ಸಿದ್ದರಾಮಯ್ಯ 21 ಹಗರಣದ ಬಗ್ಗೆ ಪಟ್ಟಿ ಕೊಟ್ಟರು. ಎಲ್ಲವನ್ನೂ ಸಿಬಿಐಗೆ ಕೊಡಿ ಎಲ್ಲಾ ಸರ್ಕಾರದ ತನಿಖೆ ಆಗಲಿ. ನಮ್ಮ 40 ವರ್ಷದ ರಾಜಕೀಯ ಜೀವನ ದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂತಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲ ಅಂದರೆ ಸಿಬಿಐಗೆ ವಹಿಸಿ. ಸಿದ್ದರಾಮಯ್ಯ ಚಿಂತಣಾಶೀಲರನ್ನು ಇಟ್ಟುಕೊಂಡು ಹೋರಾಟ ಮಾಡ್ತೀವಿ ಅಂತಾರೆ. ಚಿಂತನಾಶೀಲರು ಸಿದ್ದರಾಮಯ್ಯ ಚೇಲಾಗಳಾ? ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದ್ದರೂ ಚಿಂತನಾಶೀಲರು ತುಟಿಕ್ ಪಿಟಿಕ್ ಅಂದಿಲ್ಲ. ಎಲ್ಲವನ್ನೂ ತನಿಖೆ ಮಾಡಿಸಿ, ಎಲ್ಲಾ ಹಗರಣವನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದರು.