ಮಡಿಕೇರಿ: ಪ್ರಬಂಧ, ಚಿತ್ರಕಲಾ ಸ್ಪರ್ಧೆ

| Published : Jun 29 2025, 01:33 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯು ಬುಧವಾರ ನಡೆಯಿತು. ‘ನಮ್ಮ ಬೆಂಗಳೂರು ಹೇಗೆ ಇದ್ದರೆ ಚೆನ್ನ’ ಹಾಗೂ ‘ನಾಡಪ್ರಭು ಕೆಂಪೇಗೌಡರ ಕೊಡುಗೆ’ ಕುರಿತು ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಮಾತನಾಡಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಸದಾ ಸ್ಮರಿಸುವಂತಾಗಬೇಕು. ಅವರ ದೂರ ದೃಷ್ಟಿಯಿಂದ ಹಿಂದೆಯೇ ಬೆಂಗಳೂರು ಅಭಿವೃದ್ಧಿಯತ್ತ ಸಾಗಿತ್ತು. ಕೆರೆ ಕಟ್ಟೆಗಳ ನಿರ್ಮಾಣ, ಮರಗಿಡಗಳನ್ನು ಬೆಳೆಸಿ ಪರಿಸರ ಶುಚಿತ್ವಕ್ಕೆ ಒತ್ತು ನೀಡಿದ್ದರು ಎಂದು ಅವರು ಹೇಳಿದರು. ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಮತ್ತು ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ್ ಮಾತನಾಡಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನವನ್ನು ಪುಸ್ತಕ ರೂಪದಲ್ಲಿ ನೀಡಲಾಗುತ್ತದೆ. ಜೊತೆಗೆ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು ಅವರು ಮಾತನಾಡಿ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಮಣಜೂರು ಮಂಜುನಾಥ್, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.