ಸಾರಾಂಶ
-ಎಸ್ಸೆಸ್ ಮಲ್ಲಿಕಾರ್ಜುನ ಕೇಳಿದ್ದಕ್ಕೆಲ್ಲಾ ಅಸ್ತು ಅನ್ನುತ್ತಿದ್ದ ಎಸ್ಸೆಂ ಕೃಷ್ಣ । ಸಿಎಂ ಆಗಿದ್ದ ಕೃಷ್ಣರಿಗೆ ಎಸ್ಸೆಸ್ಸೆಂ ಮಲ್ಲಿಕಾರ್ಜುನ್‌ರೇ ಸಾರಥಿ
-----ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆನೂತನ ಜಿಲ್ಲೆಯಾಗಿ ಘೋಷಣೆಯಾದ ಬೆನ್ನಲ್ಲೇ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಶ್ರೀಕೃಷ್ಣ-ಅರ್ಜುನರಂತೆ ಮುನ್ನುಡಿ ಬರೆದವರೇ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಅಂದಿನ ಮತ್ತು ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ!
ಇಡೀ ದೇಶದಲ್ಲೇ ದಾಖಲೆಯ ವಸತಿ ಕ್ರಾಂತಿಗೆ ಕಾರಣವಾಗಿದ್ದು ಸಹ ಇದೇ ಎಸ್ಸೆಂ ಕೃಷ್ಣ-ಎಸ್ಸೆಸ್ ಮಲ್ಲಿಕಾರ್ಜುನ ಜೋಡಿ. ಎಸ್ಸೆಂ ಕೃಷ್ಣರಿಗೆ ಹಳೆ ಮೈಸೂರು ಭಾಗದಲ್ಲಿ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ ಹೇಗೋ ಅದೇ ರೀತಿ ಶಾಮನೂರು ಶಿವಶಂಕರಪ್ಪನವರ ಕಿರಿಯ ಪುತ್ರ ಎಸ್ಸೆಸ್ ಮಲ್ಲಿಕಾರ್ಜುನ ಅಂದರೂ ಅಷ್ಟೇ ಅಚ್ಚುಮೆಚ್ಚು.ಹೊಸ ಜಿಲ್ಲೆಯಾದ ದಾವಣಗೆರೆ ಉಸ್ತುವಾರಿ ಹೊತ್ತ ಉತ್ಸಾಹಿ ಯುವ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಕೇಳಿದ್ದಕ್ಕೆಲ್ಲಾ ಹಿಂದು, ಮುಂದು ನೋಡದೆ ಮಂಜೂರಾತಿ ನೀಡಿದ್ದ ಎಸ್ಸೆಂ ಕೃಷ್ಣರ ಸ್ಪಂದನೆ, ಎಸ್ಸೆಸ್ ಮಲ್ಲಿಕಾರ್ಜುನರ ಬದ್ಧತೆಯಿಂದಾಗಿ 15 ಸಾವಿರಕ್ಕೂಅಧಿಕ ಆಶ್ರಯ ಮನೆಗಳು ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಗೊಂಡು, ಸಾವಿರಾರು ಕುಟುಂಬಗಳ ಸ್ವಂತ ಸೂರು ಕಾಣುವ ಭಾಗ್ಯ ಕಲ್ಪಿಸಿದರು.
15 ಸಾವಿರಕ್ಕೂ ಅಧಿಕ ಆಶ್ರಯ ಮನೆಗಳು ಒಂದೇ ಊರಿಗೆ ಮಂಜೂರಾಗಿದ್ದು ಸಹ ಇತಿಹಾಸ. ಎಸ್ಸೆಸ್ಸೆಂ ಇಚ್ಛಾಶಕ್ತಿ, ಬದ್ಧತೆ ಎಷ್ಟರಮಟ್ಟಿಗೆ ಇದೆಯೋ, ಅದೇ ರೀತಿ ಎಸ್ಸೆಂ ಕೃಷ್ಣರಿಂದ ಸ್ಪಂದನೆಯೂ ಆಗ ಸಿಕ್ಕಿದ್ದರಿಂದ ಇಂದು ಆಶ್ರಯ ಬಡಾವಣೆಗಳೆಲ್ಲಾ ನಗರದೊಳಗೆ ಸೇರಿದ್ದು, ಆಶ್ರಯ ಬಡಾವಣೆಗಳ ಆಚೆಗೂ ಊರು ಬೆಳೆದಿದ್ದರೆ ಅದಕ್ಕೆ ಶ್ರೀಕೃಷ್ಣಾರ್ಜುನರಂತೆ ಅಂದು ಎಸ್ಸೆಂ ಕೃಷ್ಣ-ಎಸ್ಸೆಸ್ ಮಲ್ಲಿಕಾರ್ಜುನ ಮಾಡಿದ್ದ ಕೆಲಸಗಳೇ ಸಾಕ್ಷಿ.ಕೃಷ್ಣರ ಸಂಪುಟದ ಕಿರಿಯ ವಯಸ್ಸಿನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸುಮ್ಮನೇ ಕೂಡುವವರೂ ಆಗಿರಲಿಲ್ಲ. ದಾವಣಗೆರೆ ಆಳ, ಅಗಲ, ಜನರ ಅಂತ ರಾತ್ಮವನ್ನು ಅರಿತಿದ್ದವರು. ಇಲ್ಲಿನ ಶ್ರೀರಾಮ ನಗರದ ಇಂಡಸ್ಟ್ರಿಯಲ್ ಏರಿಯಾ, ಕೊಂಡಜ್ಜಿ ರಸ್ತೆ, ಮಾಗಾನಹಳ್ಳಿ ರಸ್ತೆ, ಬೂದಾಳ್ ರಸ್ತೆ ಕಡೆ ಹೀಗೆ 15 ಸಾವಿರ ಆಶ್ರಯ ಮನೆಗಳಿಗೆ ಪ್ರಸ್ತಾಪಿಸಿದಾಗ ತಕ್ಷಣ ಹಸಿರು ನಿಶಾನೆ ತೋರಿಸಿ, ನಾನಿದ್ದೇನೆಂದು ಅಭಯ ನೀಡಿದವರು ಕೃಷ್ಣ. ಪರಿಣಾಮ ನೋಡ ನೋಡುತ್ತಿದ್ದಂತೆಯೇ 15 ಸಾವಿರ ಮನೆಗಳು ತಲೆ ಎತ್ತಿದವು.
ಎಸ್ಓಜಿ ಕಾಲನಿ ಅಂತಲೇ ಹೆಸರಿಟ್ಟು, ಆಟೋ ಚಾಲಕರು, ಕ್ಷೌರಿಕ ವೃತ್ತಿ, ಹಮಾಲರು, ಕೂಲಿ ಕಾರ್ಮಿಕರು, ತರಕಾರಿ ವ್ಯಾಪಾರಿಗಳು ಹೀಗೆ ಜನರಿಗೆ ಹುಡುಕಿ ಹುಡುಕಿ ಕೊಡುವಂತೆ ಸಾವಿರಾರು ಮನೆಗಳು ತಲೆ ಎತ್ತಿದವು. ಆಗಲೇ ಎಸ್ಸೆಸ್ ಮಲ್ಲಿಕಾರ್ಜುನರ ಒಳಗಿದ್ದ ದೂರದೃಷ್ಟಿಯ ನಾಯಕನನ್ನು ಗುರುತಿಸಿದ್ದ ಎಸ್ಸೆಂ ಕೃಷ್ಣ ದಾವಣಗೆರೆ ಶಾಮನೂರು ಶಿವಶಂಕರಪ್ಪ ಪುತ್ರ ಎಸ್ಸೆಸ್ ಮಲ್ಲಿಕಾರ್ಜುನ ಏನೇ ಕೇಳಿದರೂ ಇಲ್ಲವೆನ್ನಲಿಲ್ಲ. ಒಂದೇ ಊರಿನಲ್ಲಿ 15 ಸಾವಿರ ಮನೆ ನಿರ್ಮಾಣ ಸ್ವತಃ ಸಿಎಂ ಆದವರಿಂದಲೂ ಸಾಧ್ಯವಿಲ್ಲ. ಆದರೆ, ಅದನ್ನು ಸಾಧ್ಯ ಮಾಡಿದ್ದು ಮಲ್ಲಿಕಾರ್ಜುನ. ಅದಕ್ಕೆ ಬೆನ್ನಿಗೆ ನಿಂತು ಸಾಧಿಸಲು ಕಾರಣವಾಗಿದ್ದು ಎಸ್ಸೆಂ ಕೃಷ್ಣ. ಆಶ್ರಯ ಮನೆಗಳಲ್ಲೇ ಇದೊಂದು ದಾಖಲೆಯೂ ಆಗಿದೆ.ದಿ. ಜೆ.ಎಚ್.ಪಟೇಲರ ಕನಸಿನ ಕೂಸಿಗೆ ರೆಕ್ಕೆ, ಪುಕ್ಕ ಕೊಟ್ಟು ಹಾರಲು ಕಲಿಸಿದ್ದೇ ಎಸ್ಸೆಂ ಕೃಷ್ಣ. ಅದನ್ನು ಜತನವಾಗಿ ಮತ್ತಷ್ಟು ಅಭಿವೃದ್ಧಿಪಡಿಸಿದವರು ಇದೀಗ ಮೂರನೇ ಅವಧಿಗೆ ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ. ಅಂದು ಎಸ್ಸೆಂ ಕೃಷ್ಣ ದಾವಣಗೆರೆಗೆ ಬಂದರೆ ಶಿಷ್ಟಾಚಾರವನ್ನೆಲ್ಲಾ ಬದಿಗಿಟ್ಟು, ಅರ್ಜುನನಿಗೆ ಶ್ರೀಕೃಷ್ಣ ಸಾರಥಿಯಾಗಿದ್ದರೆ, ಇಲ್ಲಿ ಕೃಷ್ಣರಿಗೆ ಮಲ್ಲಿಕಾರ್ಜುನ ಸಾರಥಿಯಾಗಿ ಕಾರು ಚಾಲನೆ ಮಾಡುತ್ತಿದ್ದುದು ಇಂದಿಗೂ ಜನರ ಸ್ಮೃತಿಪಟಲದಲ್ಲಿದೆ.
ಐತಿಹಾಸಿಕ ದಾಖಲೆಯ ಆಶ್ರಯ ಮನೆ ನಿರ್ಮಾಣಕ್ಕೆ ಕಾರಣರಾದ ಅದೇ ಎಸ್.ಎಂ.ಕೃಷ್ಣರ ಹೆಸರಿಗೆ ಅಂದು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನರ ಸಲಹೆಯಂತೆ ಎಸ್.ಎಂ.ಕೃಷ್ಣ ನಗರವೆಂದು ಆಶ್ರಯ ಕಾಲನಿಯೊಂದಕ್ಕೆ ನಾಮಕರಣ ಮಾಡಲಾಗಿತ್ತು. ಇಲ್ಲಿ ಎಸ್ಸೆಂ ಕೃಷ್ಣ-ಎಸ್ಸೆಸ್ ಮಲ್ಲಿಕಾರ್ಜುನರ ಇಚ್ಛಾಶಕ್ತಿಯಿಂದ ನಿರ್ಮಾಣಗೊಂಡ ಆಶ್ರಯ ಕಾಲನಿಗಳ ವೀಕ್ಷಣೆಗೆಂದು ಬೇರೆಡೆಯಿಂದ ಸಚಿವರು, ಶಾಸಕರು ಬಂದಿದ್ದು ಇದೆ. ಕೂಡ್ಲಿಗಿ ಶಾಸಕರಾಗಿದ್ದ ಸಿ.ಎಂ.ನಬೀ ಇಲ್ಲಿಗೆ ಬಂದು, ಆಶ್ರಯ ಮನೆಗಳನ್ನು ಯಥಾವತ್ ಕೂಡ್ಲಿಗಿಯಲ್ಲೂ ಕಟ್ಟಿಸಿದ್ದಂತಹ ಹಿನ್ನೆಲೆ ಇದೆ.ಕುಸ್ತಿಗೆ ಹೆಸರಾದ ದಾವಣಗೆರೆಯಲ್ಲಿ ಟೆನಿಸ್ ಆಟಕ್ಕೂ ಕಾಯಕಲ್ಪ ನೀಡಿದ್ದು ಸ್ವತಃ ಕ್ರೀಡಾಪಟು ಸಚಿವ ಎಸ್.ಎಸ್.ಮಲ್ಲಿಕಾರ್ಜುನ. ಇಲ್ಲಿನ ಹೈಸ್ಕೂಲ್ ಮೈದಾನದ ಒಂದು ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಕೋರ್ಟ್ ನಿರ್ಮಿಸಿದರಲ್ಲದೇ, ಸ್ವತಃ ಎಸ್ಸೆಂ ಕೃಷ್ಣ ಉದ್ಘಾಟನೆಗೆ ಆಗಮಿಸಿ, ಕೆಲ ಕ್ಷಣ ಟೆನಿಸ್ ಆಡಿದ್ದರು. ಇದೇ ಕೃಷ್ಣರ ಕಾಲದಲ್ಲಿ ಬೆಂಗಳೂರು ನಾಚುವಂತೆ ಅತೀ ಹೆಚ್ಚಿನ ಕ್ರೀಡೆಗಳಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಅನುಭವಿ ಕೋಚ್‌ಗಳು ದಾವಣಗೆರೆಯಲ್ಲಿದ್ದರು. ಅದು ದಾವಣಗೆರೆ ಕ್ರೀಡಾ ಕ್ಷೇತ್ರದ ಸುವರ್ಣ ಯುಗವಾಗಿತ್ತು. ಆಗ ಅದೆಷ್ಟೋ ಕ್ರೀಡಾಪಟುಗಳು ತಮ್ಮ ಕ್ರೀಡಾ ಸಾಧನೆಯಿಂದ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಬದಜುಕು ಕಟ್ಟಿಕೊಂಡಿದ್ದಾರೆ.
ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶಾಮನೂರು ಶಿವಶಂಕರಪ್ಪನವರು 75ನೇ ಜನ್ಮದಿನೋತ್ಸವದಲ್ಲಿ ಎಸ್ಸೆಂ ಕೃಷ್ಣ ಪಾಲ್ಗೊಂಡು, ಇಲ್ಲಿ ಶಾಮನೂರು ಶಿವಶಂಕರಪ್ಪ-ಎಸ್.ಎಸ್.ಮಲ್ಲಿಕಾರ್ಜುನ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಪಾಂಚಜನ್ಯ ಯಾತ್ರೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಎಸ್ಸೆಂ ಕೃಷ್ಣ ಪಾಂಚಜನ್ಯ ಮೊಳಗಿಸಿದ್ದರು. ಎಸ್ಸೆಸ್ ಮಲ್ಲಿಕಾರ್ಜುನ ಮೊದಲ ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೆಆರ್ ಮಾರುಕಟ್ಟೆಯಲ್ಲಿ ಮಲ್ಲಿಕಾರ್ಜುನ ಪರ ಮಂಡ್ಯ ಜಿಲ್ಲೆಯ ಸೋಮನಹಳ್ಳಿ ಮೂಲದವರಾದ ಎಸ್ಸೆಂ ಕೃಷ್ಣ ಪ್ರಚಾರ ಕೈಗೊಂಡಿದ್ದರು. ಜೆ.ಎಚ್.ಪಟೇಲರು ನೂತನ ಜಿಲ್ಲೆಯ ಜನಕರಾದರೆ, ದಾವಣಗೆರೆಗೆ ಹೈಟೆಕ್ ಸ್ಪರ್ಶ ನೀಡಿ, ಅಭಿವೃದ್ಧಿಗೆ ಮುನ್ನುಡಿ ಬರೆದವರು ಎಸ್ಸೆಂ ಕೃಷ್ಣ-ಎಸ್ಸೆಸ್ ಮಲ್ಲಿಕಾರ್ಜುನ ಜೋಡಿಯೆಂದರೂ ಅತಿಶಯೋಕ್ತಿಯಲ್ಲ...........................................
ಪಟೇಲರ ಕನಸಿ ಕೂಸಿಗೆ ರೆಕ್ಕೆ ಪುಕ್ಕ ಕೊಟ್ಟ ಕೃಷ್ಣ!ದಾಖಲೆಯ ಆಶ್ರಯ ಮನೆಗಳು ದಾವಣಗೆರೆ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲು ಅರ್ಜುನನ ಹಿಂದೆ ಶ್ರೀಕೃಷ್ಣ ನಿಂತಂತೆ ಕಿರಿಯ ವಯಸ್ಸಿನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನರಿಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಂತು ಬೆನ್ನು ತಟ್ಟುವ ಮೂಲಕ 15 ಸಾವಿರಕ್ಕೂ ಅದಿಕ ಆಶ್ರಯ ಮನೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಹೈಟೆಕ್ ಮುಖ್ಯಮಂತ್ರಿ ಅಂತಲೇ ಕರೆಯಲ್ಪಡುತ್ತಿದ್ದ ಎಸ್.ಎಂ.ಕೃಷ್ಣರ ದೂರದೃಷ್ಟಿ, ಅಭಿವೃದ್ಧಿ ಪರ ಚಿಂತನೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದವರು. ತಮ್ಮಂತೆಯೇ ಅಭಿವೃದ್ಧಿಯ ತುಡಿತದ ಎಸ್.ಎಸ್.ಮಲ್ಲಿಕಾರ್ಜುನರನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜೊತೆಗೆ ದಾವಣಗೆರೆ ಜಿಲ್ಲಾ ಉಸ್ತುವಾರಿಯನ್ನೂ ಕೊಟ್ಟು, ಹೊಸ ಜಿಲ್ಲೆ ದಾವಣಗೆ
ರೆ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಎಸ್ಸೆಸ್ ಮಲ್ಲಿಕಾರ್ಜುನ 1998ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದಲ್ಲದೇ ಸಚಿವರಾಗಿಯೂ ಜವಾಬ್ಧಾರಿ ವಹಿಸಿಕೊಂಡರು. ಹೊಸ ಜಿಲ್ಲೆ ದಾವಣಗೆರೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಎಸ್ಸೆಸ್ ಮಲ್ಲಿಕಾರ್ಜುನ ಜಿಲ್ಲೆಯ ಬಡವರಿಗೆ ಸೂರು ಕಲ್ಪಿಸುವ ಕೈಂಕರ್ಯಕ್ಕೆ ಮುಂದಾದರು. ಆಶ್ರಯ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಮನೆಗಳನ್ನು ದಾವಣಗೆರೆ ವಿವಿಧೆಡೆ ಕಟ್ಟಿ, ಬಡವರಿಗೆ ಸೂರು ಕಲ್ಪಿಸಿದರು............................
(ಫೋಟೋ ಬರಲಿವೆ)