ಎಲ್ಲಾ ಧರ್ಮಗಳ ಸಾರ ಶಾಂತಿ, ಸೌಹಾರ್ದತೆ: ಡಾ.ಬಸವಲಿಂಗ ಪಟ್ಟದೇವರು

| Published : Jul 22 2024, 01:26 AM IST

ಸಾರಾಂಶ

ಸಮಾಜದಲ್ಲಿ ಸಮಾನತೆ ಸಹೋದರತ್ವ ಮೂಢಿಸುವಲ್ಲಿ 770 ಜನರನ್ನು ಒಂದೇ ಕಡೆ ಕೂಡಿಸಿ ಅನುಭವ ಮಂಟಪ ಮುಖಾಂತರ ಸಮಾಜದ ಏಳಿಗೆಗಾಗಿ ಬಸವಣ್ಣನವರು ಶ್ರಮಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಜಗತ್ತಿನಲ್ಲಿ ಅನೇಕ ಧರ್ಮಗಳಿವೆ, ಅವುಗಳ ಸಾರಂಶ ಶಾಂತಿ ಮತ್ತು ಸೌಹಾರ್ದತೆಯನ್ನು ಬೋಧಿಸುತ್ತವೆ. ಇದರಲ್ಲಿ ಬಸವಣ್ಣನವರು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪ ಬಸವಕಲ್ಯಾಣ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ನುಡಿದರು.

ಅನುಭವ ಮಂಟಪದ ಬಸವ ಭವನದಲ್ಲಿ ಹಮ್ಮಿಕೊಂಡಿರುವ ಶಾಂತಿ ಮತ್ತು ಸೌಹಾರ್ದತೆ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಸ್ಲಾಂ, ಬೌದ್ಧ, ಜೈನ, ಹಿಂದೂ, ಸಿಖ್, ಲಿಂಗಾಯತ ಎಲ್ಲಾ ಧರ್ಮಗಳು ಶಾಂತಿಯನ್ನೇ ಭೋಧಿಸುತ್ತವೆ. ಸಮಾಜದಲ್ಲಿ ಸಮಾನತೆ ಸಹೋದರತ್ವ ಮೂಢಿಸುವಲ್ಲಿ 770 ಜನರನ್ನು ಒಂದೇ ಕಡೆ ಕೂಡಿಸಿ ಅನುಭವ ಮಂಟಪ ಮುಖಾಂತರ ಸಮಾಜದ ಏಳಿಗೆಗಾಗಿ ಬಸವಣ್ಣನವರು ಶ್ರಮಿಸಿದ್ದಾರೆ ಎಂದರು.

ಯಾವ ಧರ್ಮದಲ್ಲಿಯೂ ಅಶಾಂತಿ ನಿರ್ಮಾಣಕ್ಕೆ ಆಸ್ಪದವಿಲ್ಲ. ಹೀಗಾಗಿ ನಾವೇಲ್ಲರು ಶಾಂತಿ ಸಂದೇಶ ಬಿತ್ತಿ ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಜಮಾತೆ ಇಸ್ಲಾಂ ಹಿಂದ ಸಂಘಟನೆಯು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಮಹ್ಮದ ಸಲೀಮ ಎಂಜಿನಿಯರ್ ಮಾತನಾಡಿ, ಭಾರತ ದೇಶವು ಶಾಂತಿಗೆ ಮಹತ್ವ ನೀಡುತ್ತಿದೆ. ಅದರ ಜೊತೆಯಲ್ಲಿ ನೈತಿಕ ಜೀವನಕ್ಕೆ ನಾವೇಲ್ಲರು ಆದ್ಯತೆ ನಿಡಬೇಕು. ಬಸವಾದಿ ಶರಣರು ನೈತಿಕ ತಳಹದಿ ಮೇಲೆ ಸಮಾಜವನ್ನು ಕಟ್ಟಿದ್ದು ಅವರ ಕ್ರಾಂತಿ ಜನ ಮಾನಸದಲ್ಲಿ ಇಂದಿಗೂ ಉಳಿದಿದೆ. ಈ ದಿಸೆಯಲ್ಲಿ ಎಲ್ಲರು ಕೂಡಿ ದೇಶದಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣ ನಿರ್ಮಿಸಲು ಶ್ರಮಿಸೋಣ ಎಂದರು.

ಜಮಾತೆ ಇಸ್ಲಾಮಿ ಹಿಂದ ರಾಜ್ಯಾಧ್ಯಕ್ಷ ಡಾ.ಸಾದ ಬೆಳಗಾವಿ ಮಾತನಾಡಿ, ಬಸವ ಧರ್ಮ ಮತ್ತು ಇಸ್ಲಾಂ ಧರ್ಮ ಬಹಳ ಸೌಮ್ಯತೆ ಹೊಂದಿದೆ. ಎರಡು ಧರ್ಮಗಳು ಶಾಂತಿಯನ್ನೆ ಬೋಧಿಸುತ್ತವೆ. ಭಾರತವು ಜಗತ್ತಿನಲ್ಲಿ ಶಾಂತಿ ರಾಷ್ಟ್ರವೆಂದು ಪ್ರಸಿದ್ಧಿ ಪಡೆದಿದೆ. ಅದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.

ಬಸವಕಲ್ಯಾಣ ಬಸವ ಮಹಾಮನೆ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮೀಜಿ, ಮುಜಾಹೀದ ಪಾಶಾ ಖುರೇಷಿ, ಹುಜುರ ಪಾಷಾ, ಮೀರ್ಜಾ ಅನ್ವರಬೇಗ, ಅಕ್ರಂ ಜನಾಬ ಮುಂತಾದವರು ಉಪಸ್ಥಿತರಿದ್ದರು.