ಕನ್ನಡ ಸಾಹಿತ್ಯದಲ್ಲಿ ಸುಖ ಸಂಸಾರದ ಸಾರ: ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ

| Published : Mar 25 2024, 12:47 AM IST

ಕನ್ನಡ ಸಾಹಿತ್ಯದಲ್ಲಿ ಸುಖ ಸಂಸಾರದ ಸಾರ: ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದ ಹೆತ್ತೂರಿನಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಮಾತನಾಡಿದರು.

‘ಸಂಸ್ಕಾರ, ಸಂಸಾರ, ಸಲ್ಲಾಪ’ ವಿಚಾರಗೋಷ್ಠಿ । 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಸಕಲೇಶಪುರ

ಸುಖ ಸಂಸಾರಕ್ಕೆ ಸಂಸ್ಕಾರ ಹೊಂದಿರುವುದು ಅಗತ್ಯ. ಕನ್ನಡ ಸಾಹಿತ್ಯದಲ್ಲಿ ಇದರ ಸಾರ ಅಪಾರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಹೇಳಿದರು.

ತಾಲೂಕಿನ ಹೆತ್ತೂರಿನಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮ್ಮೇಳನದ ‘ಸಂಸ್ಕಾರ, ಸಂಸಾರ, ಸಲ್ಲಾಪ’ ಎಂಬ ವಿಚಾರಗೋಷ್ಠಿಯಲ್ಲಿ ಆಶಯನುಡಿಗಳನ್ನಾಡಿ, ಸಂಸಾರ ನಿಭಾಯಿಸುವುದು ಒಂದು ದೇಶವನ್ನು ಮುನ್ನಡೆಸಿದಷ್ಟೇ ಕಷ್ಟ. ಸುಖ ಸಂಸಾರದ ಬಗ್ಗೆ ಕನ್ನಡ ಕವಿಗಳಾದ ಮುದ್ದಣ್ಣ, ಕೆ.ಎಸ್. ನರಸಿಂಹಸ್ವಾಮಿ, ಬೇಂದ್ರೆ ಸೇರಿದಂತೆ ಹಲವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಸಂಸಾರಕ್ಕೆ ಬಡತನ ಅಡ್ಡಿಯಾಗಬಾರದು. ನಿಜವಾದ ಸುಖ ಸಿಗುವುದು ಬಡತನದಲ್ಲಿ ಎಂದು ಅಪ್ಪ್ರಾಯಪಟ್ಟರು.

ವಿಜ್ಞಾನ ಬುದ್ದಿ, ತತ್ವಜ್ಞಾನಿ ಮನಸ್ಸು, ಕವಿ ಹೃದಯ ಈ ಮೂರು ವಿಚಾರಗಳನ್ನು ಮರೆತ ವ್ಯಕ್ತಿ ಸಂಸಾರದಲ್ಲಿ ಕಷ್ಟಪಡಬೇಕಾಗುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ಸಂಘರ್ಷ ಹಾಗೂ ತಲ್ಲಣದ ನಡುವೆ ಬರುವ ಮಾತುಗಳೇ ಸಂಸ್ಕಾರ. ವೃದ್ಧರಲ್ಲಿ ಸೃಷ್ಟಿಯಾಗುವ ತಲ್ಲಣವನ್ನು ಸಂಘರ್ಷಕ್ಕೆ ಕೊಂಡೊಯ್ಯದೆ ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ ಸಂಸಾರಿ ಎಂದರು.

ವಾಗ್ಮಿ ಚಟ್ನಳ್ಳಿ ಮಹೇಶ್ ಮಾತನಾಡಿ, ಸಂಸಾರ ಎಂದರೆ ಹಲವು ಸಾರಗಳ ಸಂಕೀರ್ಣ, ತಿಳುವಳಿಕೆ ಹೊಂದಿದ್ದರೆ ಸಂಸಾರ ಒಂದು ಅದ್ಭುತ. ಇಲ್ಲದಿದ್ದರೆ ಅಧ್ವಾನ ಎಂದರು.

ಶಿಷ್ಟ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರದಲ್ಲಿ ಮಾತನಾಡಿದ ಡಾ.ಬೆಟ್ಟೆಗೌಡ, ಅನಾದಿಕಾಲದಿಂದ ರೈತರು ಭವಣೆಯಿಂದಲೇ ಬದುಕಿದ್ದಾರೆ. ಆದರೆ, ಅಂದಿನ ಕವಿಗಳು ತಮ್ಮ ಕಾವ್ಯ ಸೃಷ್ಟಿ ಭರದಲ್ಲಿ ರೈತರ ಭವಣೆ ಬಗ್ಗೆ ಗಮನಹರಿಸಲು ಸಾದ್ಯವಾಗಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಾಕಷ್ಟು ವಿಮರ್ಶಿಸಿದರೆ ಆಧುನೀಕ ಪೂರ್ವ ಇಬ್ಬರು ಕವಿಗಳು ಮಾತ್ರ ರೈತರ ಭವಣೆಯ ಬಗ್ಗೆ ಬರೆದಿರುವುದು ಗೋಚರಿಸುತ್ತದೆ. ಮೊಲದ ಬಾರಿಗೆ ರೈತರ ಬಗ್ಗೆ ಮಾತನಾಡಿರುವುದು ೧೨ ನೇ ಶತಮಾನದ ವಚನಕಾರರು. ಲದ್ದೆಯ ಸೋಮೇಶ್ವರ ಎಂಬ ಶರಣ ಸಹಕಾರ, ಶ್ರಮ ಸಂಸ್ಕೃತಿಯನ್ನು ಪ್ರತಿನಿಧಿಸಿದರೆ, ದುಡಿಮೆಯ ಮೂಲಕ ದೇವರನ್ನು ಕಾಣುವ ಬಗೆಯನ್ನು ಪರಿಚಯಿಸಿದರು.

ಒಕ್ಕಲಿಗ ಮುದ್ದಣ್ಣ ರೈತರ ಬಗ್ಗೆ ಅಪಾರ ಮೆಚ್ಚುಗೆಯನ್ನಾಡಿದರು. ೧೨ ನೇ ಶತಮಾನದಲ್ಲಿ ಆಳುವವರ ಪ್ರಶ್ನಿಸುವ ದೈರ್ಯವನ್ನು ರೈತರು ಹೊಂದಬೇಕು ಎಂದು ಹೇಳಿಕೊಟ್ಟಿದ್ದಾನೆ. ನಂತರ ೧೬ನೇ ಶತಮಾನದಲ್ಲಿದ್ದ ಕುಮಾರವ್ಯಾಸ ಕವಿ, ರೈತರ ಭವಣೆಯ ಬಗ್ಗೆ ಅವರು ಬರೆದಿರುವ ಷಟ್ಫಧಿಯಲ್ಲಿ ವ್ಯಕ್ತವಾಗುತ್ತದೆ. ಹೊಸಕನ್ನಡದ ಸಾಹಿತ್ಯದಲ್ಲಿ ಕೃಷಿಕರಿಗೆ ಮರ್‍ಯಾದೆ ತಂದುಕೊಟ್ಟಿದ್ದು ಕುವೆಂಪು ಮಾತ್ರ ಎಂದು ಹೇಳಿದರು.

ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರ ಮಾತನಾಡಿದ ಮೈಸೂರು ಕೃಷ್ಣಮೂರ್ತಿ, ಬೇರೆ ಬೇರೆ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವಿಭಜನೆಗೊಂಡಿದೆ. ಕಥೆ, ಗಾದೆ, ಗಾಯನದಂತಹ ಎಲ್ಲ ಪ್ರಕಾರಗಳಲ್ಲೂ ರೈತಪರ ಚಿಂತನೆಗಳು ಮೂಡಿ ಬಂದಿರುವುದು ಸ್ಪಷ್ಟವಾಗುತ್ತದೆ. ರೈತನ ಸವಾಲು, ಸಂಕಟಗಳನ್ನು ಜನಪದ ಸಾಹಿತ್ಯ ರಾಶಿಯಲ್ಲಿ ಕಾಣಬಹುದಾಗಿದೆ. ರೈತರ ಮೇಲೆ ಅನಾಧಿಕಾಲದಿಂದ ನಡೆದಿರುವ ಶೋಷಣೆಗಳನ್ನು ಜನಪದ ಸಾಹಿತ್ಯ ಪ್ರಕಾರಗಳಾದ ಲಾವಣಿಯಲ್ಲಿ ಕಾಣಬಹುದಾಗಿದೆ. ಕೃಷಿಕನಾಗದ ಯಾವುದೆ ವ್ಯಕ್ತಿ ಏನು ಆಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬಂಗಾರದ ಮನುಷ್ಯ ಎಂಬ ಕಲ್ಪನೆ ಬಂದಿದ್ದೆ ಹೊನ್ನ ಬೆಳೆಯುವ ರೈತನಿಂದ ಎಂಬ ಅರಿವು ನಮಗಿರಬೇಕು. ಕನ್ನಡದಲ್ಲಿ ರಚನೆಯಾದ ಸಾಹಿತ್ಯವನ್ನು ಕೃಷಿಗೆ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಭಾಷಾ ಸಂಪತ್ತಿಗೆ ಕೃಷಿಕರ ಕೊಡುಗೆ ವಿಚಾರವಾಗಿ ಡಾ.ಅ.ಪ.ರಕ್ಷಿತ್ ಮಾತನಾಡಿ, ಕೃಷಿ ಇಲ್ಲದೆ ಆಹಾರ ಕ್ರಮ ಇಲ್ಲ ಎಂಬುದು ಸತ್ಯ. ಒಂದೂವರೆ ಲಕ್ಷ ಪದಗಳನ್ನು ಒಳಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿಗೆ ಕೃಷಿ ಸಾಹಿತ್ಯ ನೆರವಾಗಿದೆ. ಮನುಷ್ಯ ಯಾವಾಗ ಆಹಾರಕ್ಕಾಗಿ ಬೇಟೆ ಪ್ರಾರಂಭಿಸುತ್ತಾನೋ ಆಹಾರ ಸಿಕ್ಕ ಜಾಗದಲ್ಲೇ ನೆಲೆ ನಿಲ್ಲಲು ಯೋಚಿಸುತ್ತಾನೆ. ಈ ವೇಳೆ ಸಂವಹನ ಮಾಡಲು ಭಾಷೆ ಬಳಸಿಕೊಳ್ಳುತ್ತಾನೆ. ಮನುಷ್ಯ ನಾಗರಿಕತೆ ಬೆಳೆಯಲು ಕೃಷಿ ಕಾರಣ. ಭೂಮಿಯನ್ನು ಸಮತಟ್ಟು ಮಾಡುವ ಹಂತದಿಂದ ಬೆಳೆ ಬೆಳೆದು ತಟ್ಟೆಗೆ ಅನ್ನವಾಗಿ ಬರುವ ವರೆಗೆ ಅನೇಕ ಪದಗಳಾಗಿ ಆ ಪ್ರಕ್ರಿಯೆ ನಡೆಯುತ್ತದೆ. ಗೆಡ್ಡೆ ಗೆಣಸು ಹುಡುಕಿ ಪುರುಷ ಮನೆಯಿಂದ ಹೊರಗೆ ಹೋದಾಗ ಮಹಿಳೆ ಸಸಿ ನೆಡಲು ಮುಂದಾಗುತ್ತಾಳೆ. ಗುದ್ದಲಿ, ಪಿಕಾಸಿ ಮತ್ತಿತರ ಸಲಕರಣೆಗಳ ಹುಟ್ಟುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ಆಗ ಕೆಲವೊಂದು ಪದಗಳು ಹುಟ್ಟುಕೊಂಡವು. ಆ ಬಳಿಕ ಅವುಗಳು ಕ್ರಿಯಾಪದಗಳಾಗಿ ಹುಟ್ಟಿದವು. ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಅಧ್ಯಕ್ಷತೆ ವಹಿಸಿದ್ದ ಡಾ. ಮ.ರಾಮಕೃಷ್ಣ ಮಾತನಾಡಿ, ಒಕ್ಕಲುತನದ ಬಗ್ಗೆ ಏನೇನೋ ಹೇಳ್ತಿವಿ ಆದರೆ ವಸ್ತುಸ್ಥಿತಿ ಬೇರೆಯಾಗಿದೆ. ಸರ್ಕಾರಿ ನೌಕರಿಯೇ ಮುಖ್ಯವಾಗಿರುವಾಗ ಕೃಷಿಗೆ ಬರಲು ಯಾರೂ ಮುಂದೆ ಬರುವುದಿಲ್ಲ. ರೈತ ತನ್ನ ವೃತ್ತಿಯನ್ನು ಮಗನಿಗೆ ಕಲಿಸಲು ಮನಸ್ಸು ಮಾಡುವುದಿಲ್ಲ. ಈ ವ್ಯವಸ್ಥೆ ಬದಲಾಗುವ ವರೆಗೆ ಕೃಷಿಗೆ ಪ್ರೋತ್ಸಾಹ ಸಿಗುವುದಿಲ್ಲ. ಕುವೆಂಪು ಬರುವವರೆಗೆ ಕೃಷಿಯನ್ನು ಸಾಹಿತ್ಯ ಕ್ಷೇತ್ರ ಮರೆತಿತ್ತು. ಇತ್ತೀಚಿನ ದಿನಗಳಲ್ಲಿ ವ್ಯವಸಾಯದ ಬಗ್ಗೆ ಸಾಹಿತ್ಯ ವೇದಿಕೆಗಳಲ್ಲಿ ಚರ್ಚೆಯಾಗುತ್ತಿರುವುದು ಆಶಾಭಾವ ಮೂಡಿಸಿದೆ ಎಂದರು.

ಎಸ್‌ಕೆಪಿ ಕನ್ನಡ ಸಾಹಿತ್ಯ ಮತ್ತು ರೈತ ಪರ ಚಿಂತನೆಗಳು ಎಂಬ ಚರ್ಚಾಗೋಷ್ಠಿ ನಡೆಯಿತು.