ಎಸ್ಸೆಸ್ಸೆಲ್ಸಿ: ಕೂಲಿ ಕುಟುಂಬದ ಅಪೇಕ್ಷಾ ರಾಜ್ಯಕ್ಕೆ 10ನೇ ಟಾಪರ್‌

| Published : May 05 2025, 12:46 AM IST

ಎಸ್ಸೆಸ್ಸೆಲ್ಸಿ: ಕೂಲಿ ಕುಟುಂಬದ ಅಪೇಕ್ಷಾ ರಾಜ್ಯಕ್ಕೆ 10ನೇ ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ವಿದ್ಯಾನಗರ ಪುಂಡಿಕಾಯಿ ನಿವಾಸಿ ಅಪೇಕ್ಷಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 (ಶೇ.98.6) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 10 ನೇ ಸ್ಥಾನ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕೂಲಿ ಮಾಡಿ, ಬೀಡಿ ಕಟ್ಟಿ ಜೀವನ ಸಾಗಿಸುವ ಬಡ ಕುಟುಂಬದ ವಿದ್ಯಾರ್ಥಿನಿ, ತಾಲೂಕಿನ ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ವಿದ್ಯಾನಗರ ಪುಂಡಿಕಾಯಿ ನಿವಾಸಿ ಅಪೇಕ್ಷಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 (ಶೇ.98.6) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 10 ನೇ ಸ್ಥಾನ ಗಳಿಸಿದ್ದಾರೆ. ಈಕೆ ಮುಂದೆ ಕೆಮಿಕಲ್‌ ಎಂಜಿನಿಯರ್‌ ಆಗುವ ಕನಸು ಹೊತ್ತಿದ್ದಾಳೆ.

ಈಕೆಯ ತಂದೆ ಚಂದ್ರಶೇಖರ್ ಕೂಲಿ ಕೆಲಸ ನಿರ್ವಹಿಸುವವರಾಗಿದ್ದು, ತಾಯಿ ಸರಸ್ವತಿ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಇವರ ಏಕೈಕ ಪುತ್ರಿ ಅಪೇಕ್ಷಾ ಬಡತನ ಮೆಟ್ಟಿ ನಿಂತು ಉನ್ನತ ಅಂಕ ಗಳಿಸಿದ್ದಾಳೆ.ದಿನದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ ಅಪೇಕ್ಷಾ ತರಗತಿಗಳಲ್ಲಿ ಪ್ರತಿಭಾನ್ವಿತೆಯಾಗಿದ್ದಳು. ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದವಳು ರಸಪ್ರಶ್ನೆ ವಿಭಾಗದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಳು. ಈ ಕುರಿತು ಶಾಲಾ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಮಾತನಾಡಿ, ಅಪೇಕ್ಷಾ ಬಡತನವನ್ನು ಅಡ್ಡಿಯೆಂದು ತಿಳಿದುಕೊಳ್ಳದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕುಣಿತ ಭಜನೆ, ರಸಪ್ರಶ್ನೆ ವಿಭಾಗದಲ್ಲಿ ವಿಶೇಷ ತರಬೇತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಳು ಎಂದು ತಿಳಿಸಿದರು.ಕೇರಳದ ಗಡಿಭಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ನಡೆಸುತ್ತಿರುವ ಶಾಲೆಯಲ್ಲಿ ಎಂದಿಗೂ ಮಾರ್ಕ್ ಕೇಳಿ ಸೀಟು ನೀಡುತ್ತಿಲ್ಲ. ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳನ್ನು ತರಬೇತು ನಡೆಸಿ ಉನ್ನತ ಸ್ಥಾನಕ್ಕೆ ಏರುವಂತಹ ಪ್ರಯತ್ನ ನಿರಂತರವಾಗಿದೆ ಎಂದು ತಿಳಿಸಿದರು.

ಟ್ಯೂಷನ್‌ ಪಡೆಯದೇ ಕಲಿಕೆಯಲ್ಲಿ ಆಸಕ್ತಿ ತೋರಿಸಿ ಕಲಿತ ಪರಿಣಾಮ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಬಿಡುವಿನ ಸಮಯದಲ್ಲಿ ಮಾತ್ರ ಟಿ.ವಿ ನೋಡುತ್ತಿದ್ದೆ, ಅಂದಿನ ಪಾಠವನ್ನು ಅಂದೇ ಓದುವುದನ್ನು ರೂಢಿಯಾಗಿಸಿದ್ದೆನು. ಇದು ಪರೀಕ್ಷಾ ಸಂದರ್ಭ ಸಹಕಾರಿಯಾಗಿದೆ. ಮುಂದೆ ವಿಜ್ಞಾನ ವಿಷಯ ಪಡೆದುಕೊಂಡು ಕೆಮಿಕಲ್ ಇಂಜಿನಿಯರಿಂಗ್ ಆಗುವ ಕನಸು ಇದೆ ಎನ್ನುತ್ತಾಳೆ ಅಪೇಕ್ಷಾ.

.................

ಮೂಳೆ ಮುರಿದು ಬೆಡ್‌ ರೆಸ್ಟ್‌ನಲ್ಲಿದ್ದ ನಿಶಾ ಅಂಜುಮ್‌ಗೆ ಶೇ.97 ಫಲಿತಾಂಶ!

ಶಾಲೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಕಾಲಿನ ಮೂಳೆ ಮುರಿದು ಗಂಭೀರ‌ ಗಾಯಗೊಂಡು ಬೆಡ್ ರೆಸ್ಟ್ ನಲ್ಲಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನಿಶಾ ಅಂಜುಮ್ ದೈರ್ಯದಿಂದ ಪರೀಕ್ಷೆ ಎದುರಿಸಿ 607 (97.12ಶೇ.) ಅಂಕ ಗಳಿಸುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾಳೆ.ಉಳ್ಳಾಲ ತಾಲೂಕು ಕೊಣಾಜೆ ಪದವು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಮೂಲತಃ ಗದಗ ಜಿಲ್ಲೆಯವಳು. ಗದಗ ಮುಲುಗುಂದದ ದಾವಲ್ ಸಾಹೇಬ್-ಮೆಹಬೂಬಿ ದಂಪತಿ ಪುತ್ರಿ. ಊರಿನಿಂದ ಉದ್ಯೋಗ ಅರಸಿಕೊಂಡು ಹಾಗೂ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಮಂಗಳೂರಿಗೆ‌ ಬಂದಿದ್ದ ಕುಟುಂಬ ಕೊಣಾಜೆಯ ದಾಸರಮೂಲೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.‌ ಕಾರು ಅಫಘಾತದಲ್ಲಿ ನಿಶಾ ಅಂಜುಮ್ ಗೆ ತೊಡೆಯ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಳು. 40ಕ್ಕೂ ಹೆಚ್ಚು ದಿನ ಬೆಡ್ ರೆಸ್ಟ್ ನಲ್ಲೇ ಇದ್ದಳು. ಇದರ‌ ನಡುವೆಯೂ ಓದು ಮುಂದುವರಿಸಿದ್ದ ಆಕೆ‌ ವಾಕರ್ ಸಹಾಯದಿಂದ ಕೆಲವು ದಿನ ಶಾಲೆಗೆ ಹೋಗಿ ಬಳಿಕ ವಿಶ್ವಮಂಗಳ ಶಾಲೆಯಲ್ಲಿ ಪರೀಕ್ಷೆ ಎದುರಿಸಿದ್ದಳು.‌ ಇದೀಗ ನಿಶಾ ಅಂಜುಮ್ ಗೆ ಶೇ.97 ಅಂಕ ಬಂದಿರುವುದು ಪಾಲಕರಿಗೆ, ಶಾಲಾ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.‌