ಕನ್ನಡದ ಸಾಕಷ್ಟು ದಾಸ ಸಾಹಿತ್ಯಸೇರಿ ಹಲವು ಕಲೆಗಳು ಬೆಳೆದಿರುವುದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಈ ನೆಲದಲ್ಲಿ ಸಾಹಿತ್ಯ, ಸಂಗೀತ, ನಾಟಕ ಕಲೆ, ದೊಡ್ಡಾಟ, ಬಯಲಾಟಗಳು ಏನಾದರೂ ಉಳಿದಿದ್ದಾವೆ ಎನ್ನುವುದಾದರ ಅದು ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲಿ ಉಳಿದಿವೆ.

ಮರಿಯಮ್ಮನಹಳ್ಳಿ: ರಂಗಕಲೆಯ ತವರೂರು ಎನಿಸಿಕೊಂಡಿರುವ ಮರಿಯಮ್ಮನಹಳ್ಳಿಯಲ್ಲಿ ವಿಜಯನಗರ ಜಿಲ್ಲಾ ರಂಗಾಯಣವನ್ನು ಸರ್ಕಾರ ಸ್ಥಾಪಿಸಬೇಕು ಎಂದು ದಾರವಾಡದ ಆಟಮಾಟ ತಂಡದ ಮಹಾದೇವ ಹಡಪದ ಒತ್ತಾಯಿಸಿದರು.

ಇಲ್ಲಿನ ದುರ್ಗಾದಾಸ ಕಲಾಮಂದಿರದಲ್ಲಿ ಭಾನುವಾರ ರಾತ್ರಿ ನಡೆದ ಲಲಿತಕಲಾ ರಂಗದ 41ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡದ ಸಾಕಷ್ಟು ದಾಸ ಸಾಹಿತ್ಯಸೇರಿ ಹಲವು ಕಲೆಗಳು ಬೆಳೆದಿರುವುದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ, ಈ ನೆಲದಲ್ಲಿ ಸಾಹಿತ್ಯ, ಸಂಗೀತ, ನಾಟಕ ಕಲೆ, ದೊಡ್ಡಾಟ, ಬಯಲಾಟಗಳು ಏನಾದರೂ ಉಳಿದಿದ್ದಾವೆ ಎನ್ನುವುದಾದರ ಅದು ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲಿ ಉಳಿದಿವೆ. ಈ ಕಲೆಗಳನ್ನು ಯುವ ಜನಾಂಗ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಿಂದ ಮತ್ತು ನಾಟಕ ಕಲೆಗಳಿಗೆ ಸೂಕ್ತ ಪ್ರದೇಶ ಮರಿಯಮ್ಮನಹಳ್ಳಿ ಆಗಿರುವುದರಿಂದ ಇಲ್ಲಿ ಸರ್ಕಾರ ರಂಗಾಯಣವನ್ನು ಸ್ಥಾಪಿಸುವ ಮೂಲಕ ರಂಗ ಕಲೆಯನ್ನು ಮತಷ್ಟು ಬೆಳ‍ಸಬೇಕು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯ ಸಮೃದ್ಧವಾದುದು. ಇಂತಹ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಸರ್ಕಾರ ಒಂದು ರಂಗಾಯಣವನ್ನು ಕೊಡಬೇಕು ಎನ್ನುವ ಕೂಗು ಇಲ್ಲಿನ ಜನರು ಒಂದು ದೊಡ್ಡ ಹೋರಾಟ ನಡೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಹಗರಿಬೊಮ್ಮನಹಳ್ಳಿ ಸಾಹಿತಿ, ಉಪನ್ಯಾಸಕಿ ಸುಧಾ ಚಿದಾನಂದಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಸಾಮಾಜಿಕ ಜಾಲತಾಣಗಳು ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ರಂಗಭೂಮಿ ಜೀವಂತವಾಗಿ ಉಳಿದುಕೊಂಡಿದೆ ಎಂದು ಅವರು ಹೇಳಿದರು.

ರಂಗ ಕಲೆಗಳು ಮನರಂಜನೆ ಜೊತೆಗೆ ಶಿಕ್ಷಣ, ಸಾಮಾಜಿಕ ಬದಲಾವಣೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿವೆ. ರಂಗಭೂಮಿಯಲ್ಲಿ ಯುವ ಸಮುೂಹ ತೊಡಗಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರಂಗಭೂಮಿಯ ಭವಿಷ್ಯ ಏನು? ಎನ್ನುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರಂಗಭೂಮಿ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿಯಲ್ಲಿ ಲಲಿತಕಲಾ ರಂಗದವರು ರಂಗಭೂಮಿ ಜೀವಂತವಾಗಿಸಿದ್ದಾರೆ. ರಂಗಕಲಾವಿದರು ಸಂಘಟಿತರಾಗುತ್ತಾ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

2024-​25ನೇ ಸಾಲಿನ ಪದ್ಮರಾಜ್‌ ಜೈನ್‌, ನೇಮಿರಾಜ್‌ ಜೈನ್‌ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಮರಿಯಮ್ಮನಹಳ್ಳಿಯ ಹಿರಿಯ ವೃತ್ತಿರಂಗ ಕಲಾವಿದೆ ಸೆರೆಗಾರ ಗಂಗಮ್ಮ ಅವರಿಗೆ ನೀಡಿ ಗೌರವಿಸಲಾಯಿತು.

ಲಲಿತ ಕಲಾರಂಗದ ಅಧ್ಯಕ್ಷ ಎಚ್‌. ಮಂಜುನಾಥ ಅಧ್ಯಕ್ಷತೆ ವಹಿಸಿಕೊಂಡಿದ್ದರು. ನಿವೃತ್ತ ಶಿಕ್ಷಕರಾದ ಡಿ. ಭಾರತಿ, ಕರಿಬಸಪ್ಪ, ಧಾರವಾಡದ ಆಟಮಾಟ ತಂದ ಮುಖ್ಯಸ್ಥ ಮಹಾದೇವ ಹಡಪದ್‌, ಗಮಕ ಕಲಾವಿದ ಡಿ. ವಿಶ್ವನಾಥ ಅತಿಥಿಗಳಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ನಂತರ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಶಾಲೆಯ ಶಿಕ್ಷಕಿ ಚಿತ್ರಾ ಆರ್ ಶಾಸ್ತ್ರಿ ಮತ್ತು ಡಿ. ವಿಶ್ವನಾಥ ಅವರಿಂದ ಗಮಕ ವಾಚನ ಕಾರ್ಯಕ್ರಮ ನಡೆಯಿತು.

ನಂತರ ಧಾರವಾಡದ ಆಟ ಮಾಟ ತಂಡದ ಕಲಾವಿದರಿಂದ ರಾಜಕುಮಾರ ಮಡಿವಾಳರ ಅವರ ನಾಟಕ ರಂಗಪಠ್ಯವನ್ನು, ಮಹಾದೇವ ಹಡಪದ ವಿನ್ಯಾಸಗೊಳಿಸಿ ನಿರ್ದೇಶಿಸಿರುವ ಗುಡಿಯ ನೋಡಿರಣ್ಣಾ ನಾಟಕ ಪ್ರದರ್ಶನಗೊಂಡಿತು.

ಈರಣ್ಣ ಐನಾಪುರ, ಗಾಯತ್ರಿ ಹೆಗ್ಗೋಡು, ಮಂಜುನಾಥ ಬಗಲಿ, ಮಹಾದೇವ ಹಡಪದ, ಫಕ್ಕೀರಪ್ಪ ಕೋರಿ, ವೀರೇಶ ಹಿರೇಮಠ, ಸಿದ್ದೇಶ ಅವಟಿ ಸೇರಿದಂತೆ ಇತರೆ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ಯೋಗೇಶ್‌ ಬಗಲಿ ಮತ್ತು ಸಂಗಮೇಶ್‌ ಸೋರಗಾಂವಿ ನಾಟಕಕ್ಕೆ ಬೆಳಕು ನೀಡಿದರು. ಎಂ.ಆರ್‌. ಅನುಷಾ ಪ್ರಾರ್ಥಿಸಿದರು. ಕೆ. ನಾಗೇಶ್‌ ಸ್ವಾಗತಿಸಿದರು. ಬಿ.ಎಂ.ಎಸ್‌. ಮೃತ್ಯುಂಜಯ ವಾರ್ಷಿಕ ವರದಿ ಮಂಡಿಸಿದರು. ಜಿ. ಎಂ. ಕೊಟ್ರೇಶ್‌ ವಂದಿಸಿದರು. ಜಿ. ಸೋಮಶೇಖರ್‌ ನಿರೂಪಿಸಿದರು.