ಸಾರಾಂಶ
-ರಾಜ್ಯ ಸರ್ಕಾರಕ್ಕೆ ಡಾ.ಸಿದ್ದರಾಮ ಬೆಲ್ದಾಳ ಶರಣರ ಆಗ್ರಹ । ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪ
-----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೀದರ್ ನ ಬಸವ ಕಲ್ಯಾಣದಲ್ಲಿ ವಚನ ವಿವಿ ಸ್ಥಾಪಿಸುವುದರ ಮೂಲಕ ವಚನ ಸಾಹಿತ್ಯ ಅಧ್ಯಯನಕ್ಕೆ ವಿಸ್ತೃತ ಸ್ವರೂಪ ನೀಡಬೇಕೆಂದು ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಸಿದ್ದರಾಮ ಬೆಲ್ದಾಳ ಶರಣರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಮುರುಘಾಮಠದ ಅನುಭವ ಮಂಟದಲ್ಲಿ ನಡೆಯುತ್ತಿರುವ 13ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷೀಯ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಪ್ರಾಥಮಿಕದಿಂದ ಸ್ವಾತಕೋತ್ತರವರೆಗೆ ಶರಣ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಬೇಕು. ಸಮಾನತೆ, ಶಾಂತಿ ಸಾರುವ ಶರಣ ಸಾಹಿತ್ಯವನ್ನು ಸಾರ್ವತ್ರಿಕ ಮತ್ತು ಜಾಗತಿಕ ಮೌಲ್ಯವೆಂದು ಘೋಷಿಸಬೇಕು. ಬಸವ ಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಿ ಒಂದುವರೆ ವರ್ಷದ ಒಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಇಂದು ಧರ್ಮ ದೇವರ ಹೆಸರಿನಲ್ಲಿ ಮಾನವ ಪ್ರತ್ಯೇಕತೆ ಗಟ್ಟಿಗೊಳ್ಳುತ್ತಿದೆ. ದ್ವೇಷ, ಅಸೂಯೆ, ಹಿಂಸೆ, ಶೋಷಣೆಗಳು ಬಲಗೊಳ್ಳುತ್ತಿವೆ. ಇದರಿಂದ ದೇಶ ಮುಂದೊಂದು ದಿನ ತುಂಡಾಗುವ ಆತಂಕವಿದ್ದು ಮಾನವನ ಪ್ರತ್ಯೇಕಿಸುವ ಧರ್ಮಾಂದತೆಯ ಬೇರುಗಳ ಬೆಳೆಯಲು ಬಿಡಬಾರದು. ಧರ್ಮವೆಂದರೆ ದಯೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಂಬ ಭಾವ ಪ್ರತಿಯೊಬ್ಬರಲ್ಲೂ ನೆಲೆಗೊಳ್ಳಬೇಕು. ದೇವರು ಹೊರಗಿಲ್ಲ. ತನ್ನನ್ನು ತಾನು ವಿಕಾಸ ಗೊಳಿಸಿಕೊಳ್ಳುವುದರಿಂದ ದೈವತ್ವ ಅರಳುತ್ತದೆ. ಮಾನವನ ಅಖಂಡತೆ, ಏಕತೆಯ ಮೂಲ ಬೇರು ಶರಣ ಸಾಹಿತ್ಯದಲ್ಲಿದೆ ಎಂದರು.ಸಾಮಾಜಿಕ ಸಾಮರಸ್ಯ ಇಂದಿನ ತುರ್ತು ಅಗತ್ಯವಾಗಿದೆ. ಬಡವ ಮತ್ತಷ್ಟು ಬಡವನಾಗಿ, ಶ್ರೀಮಂತ ಮತ್ತಷ್ಟು ಶ್ರೀಮಂತನಾಗುವ ಆಡಳಿತ ನೀತಿ ಅಳಿಯಬೇಕು. ಪ್ರತಿಯೊಬ್ಬ ಕಾಯಕ ಮಾಡಿಯೇ ಗಳಿಸಬೇಕು, ದಾಸೋಹದಲ್ಲಿ ಸವೆಸಬೇಕು. ಇದರಿಂದ ಆರ್ಥಿಕ ಅಸಮಾನತೆ ಅಳಿಯುತ್ತದೆ, ಸಮತೆ ಶಾಂತಿ ನೆಲೆಸುತ್ತದೆ ಎಂದು ಸಿದ್ದರಾಮ ಬೆಲ್ದಾಳ ಶರಣರು ಹೇಳಿದರು.
ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ,ಕಳೆದ ನಾಲ್ಕೈದು ದಶಕಗಳ ಹಿಂದೆ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ನಾಡಿನ ಮೂಲೆ ಮೂಲೆಗಳಿಗೆ ಬಸವಾದಿ ಶರಣರ ತತ್ವಗಳನ್ನು ಮುಟ್ಟಿಸುವ ಕೆಲಸವ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾಡಿದರು. ನಂತರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ವಚನ ಸಾಹಿತ್ಯವ ಪಸರಿಸುವ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು ಚನ್ನಬಸಪ್ಪ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿಗಳು, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ,ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಡಾ.ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ವಿಪ ಸದಸ್ಯ ಕೆ.ಎಸ್.ನವೀನ್, ಮಾಜಿ ಸಚಿವ ಎಸ್.ಎಸ್.ಪಾಟೀಲ್, ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ, ಶರಣ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಎಸ್.ಆರ್.ಗುಂಜಾಳ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್, ಖಜಾಂಚಿ ಎಸ್.ಎಂ.ಹಂಪಯ್ಯ ಇದ್ದರು. ಶಸಾಪ ರಾಜ್ಯ ಅಧ್ಯಕ್ಷ ಸೋಮಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
-----------ಪೋಟೋ ಕ್ಯಾಪ್ಸನ್
ಚಿತ್ರದುರ್ಗ ಮುರುಘಾಮಠದ ಅನುಭವ ಮಂಟಪದಲ್ಲಿ ಆರಂಭಗೊಂಡ ಅಖಿಲ ಭಾರತ 13 ನೇ ಶರಣ ಸಾಹಿತ್ಯ ಸಮ್ಮೇಳವನ್ನು ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಸಿದ್ದರಾಮ ಬೆಲ್ದಾಳ ಶರಣರು ಇದ್ದಾರೆ.----------
ಪೋಟೋ ಫೈಲ್ ನೇಮ್- 18 ಸಿಟಿಡಿ 1--