ಸೈಬರ್‌ ಅಪರಾಧಗಳು, ಆರ್ಥಿಕ ಅಪರಾಧಗಳ ನಿಯಂತ್ರಣಕ್ಕೆ ತರಬೇತಿ ಅವಶ್ಯಕ. ನ್ಯಾಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಭಿಯೋಜಕರು ನಿರಂತರ ಅಧ್ಯಯನ ಮಾಡಬೇಕು. ಅದಕ್ಕಾಗಿ ಅಭಿಯೋಜಕರ ಅಕಾಡೆಮಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್‌ ಅಪರಾಧಗಳು, ಆರ್ಥಿಕ ಅಪರಾಧಗಳ ನಿಯಂತ್ರಣಕ್ಕೆ ತರಬೇತಿ ಅವಶ್ಯಕ. ನ್ಯಾಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಭಿಯೋಜಕರು ನಿರಂತರ ಅಧ್ಯಯನ ಮಾಡಬೇಕು. ಅದಕ್ಕಾಗಿ ಅಭಿಯೋಜಕರ ಅಕಾಡೆಮಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶನಿವಾರ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಹಾಗೂ 17ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಭಿಯೋಜಕರು ನ್ಯಾಯ ಸಂರಕ್ಷಕರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವೆಲ್ಲವೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖೀ ರಾಜ್ಯ ಸ್ಥಾಪನೆ ಸಾಧ್ಯ. ಸಮಾಜದ ಜನರಹಿತ ಕಾಪಾಡುವುದು ನಮ್ಮೆಲ್ಲರ ಕೆಲಸ. ಸಮಸ್ಯೆಗಳ ಹೊರತಾಗಿಯೂ ನ್ಯಾಯ ಒದಗಿಸಬೇಕು. ಅಸಮಾನತೆಯಿರುವ ಸಮಾಜದಲ್ಲಿ ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ನಾಗರಿಕ ಸುರಕ್ಷಾ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕಾಯ್ದೆಯ ಸೆಕ್ಷನ್ 8 ಮತ್ತು 9 ರ ಪ್ರಕಾರ ಅಭಿಯೋಜಕರನ್ನು ವಿಂಗಡಿಸಿ, ಕರ್ತವ್ಯಗಳನ್ನು ಹೇಳಿದ್ದಾರೆ. ಆರೋಪಿಗಳ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ನಿಯಮ ರೂಪಿಸಿದೆ. ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು. ಅದಕ್ಕಾಗಿ ಅಭಿಯೋಜಕರು ನಿರಂತರ ಅಧ್ಯಯನ ಮೂಲಕ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಹೈಕೋರ್ಟ್‌ ನ್ಯಾ.ಎಚ್‌.ಪಿ.ಸಂದೇಶ್‌, ಗೃಹ ಇಲಾಖೆ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಡಿಜಿಪಿ ಡಾ.ಎಂ.ಎ.ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕ ಅಂಜಲಿ ದೇವಿ, ರಾಜ್ಯ ಅಭಿಯೋಜನಾ ಅಧಿಕಾರಿಗಳ ಸಂಘದ ಅಶ್ವತ್‌ನಾರಾಯಣ್ ಇದ್ದರು.---