ಕೆಎಲ್‌ಇ ವಿವಿಯಲ್ಲಿ ಇನ್ಕ್ಯೂಬೇಷನ್‌, ಇನೋವೆಷನ್‌ ಕೇಂದ್ರ ಸ್ಥಾಪನೆ

| Published : Nov 18 2023, 01:00 AM IST

ಕೆಎಲ್‌ಇ ವಿವಿಯಲ್ಲಿ ಇನ್ಕ್ಯೂಬೇಷನ್‌, ಇನೋವೆಷನ್‌ ಕೇಂದ್ರ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸುವಲ್ಲಿ ಕಾಹೆರನ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್ಇ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಇನ್ಕ್ಯೂಬೇಷನ್ ಮತ್ತು ಇನೋವೆಷನ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

ಭಾರತದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸುವಲ್ಲಿ ಕಾಹೆರನ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿ ಪ್ರಾರಂಭಗೊಳ್ಳುವ ಸ್ಟಾರ್ಟ ಅಪಗಳಿಗೆ ಶೈಕ್ಷಣಿಕ ಸಂಪನ್ಮೂಲ, ಅಗತ್ಯ ಮಾಹಿತಿ, ಮಾರ್ಗದರ್ಶನ, ನೆಟ್ವರ್ಕಿಂಗ್, ಪರಿಣತಿ ಮತ್ತು ಅನುಭವಿ ವೃತ್ತಿಪರರಿಂದ ಸಹಕಾರ ಸಿಗಲಿದೆ. ಕೆಐಐಸಿ ನಇಧಿ ಸಂಗ್ರಹ, ಸಾಮಾಜಿಕ ಜವಾಬ್ದಾರಿ, ಸೇರಿದಂತೆ ಅನೇಕ ರೀತಿಯ ಬೆಂಬಲವನ್ನು ಪಡೆದುಕೊಳ್ಳಬಹುದು ಎಂದರು.

ಪ್ರಾರಂಭಿಕ ಹಂತದಲ್ಲಿ ಎಲ್ಲ ರೀತಿಯ ಸಹಕಾರವನ್ನು ಕಾಹೇರ ನೀಡಲಿದೆ. ಕಾಹೆರ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಕೇಂದ್ರವು ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಯ ಬದಲಾವಣೆಗೆ ಅನುಗುಣವಾಗಿ ಮೆಡ್-ಟೆಕ್ ಸ್ಟಾರ್ಟ ಅಪ್‌ಗಳಿಗೆ ಸಂಪನ್ಮೂಲ ಕಲ್ಪಿಸುವದರೊಂದಿಗೆ ಹೊಸ ಮೆಡ್ ಟೆಕ್ ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕರಣಗೊಳಿಸಿ, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ನಾವೀನ್ಯತೆ ಮತ್ತು ಹೂಡಿಕೆ ಆಕರ್ಷಿಸಲು ಸಹಕರಿಸಲಿದೆ. ಕೆಎಲ್‌ಇ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಕೇಂದ್ರವು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿನ ಶ್ಟಾರ್ಟಅಪಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾತ್ರ ಮೀಸಲಾಗಿದೆ ಎಂದು ಹೇಳಿದರು.

ವೈದ್ಯಕೀಯ ಸಲಕರಣೆ ಮತ್ತು ಅವುಗಳ ಉಪುತ್ಪನ್ನಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಕಲ್ಪಣೆಯು ಭಾರತೀಯ ಆರೋಗ್ಯ ರಕ್ಷಣೆಯಲ್ಲಿ ವಿಶೇಷವಾಗಿ ವೈದ್ಯಕೀಯ ಸಲಕರಣೆ ಉದ್ಯಮದಲ್ಲಿ ಬದಲಾವಣೆ ತರಲು ಅವಕಾಶವನ್ನು ಒದಗಿಸುತ್ತದೆ. ಕೆಐಐಸಿ ಈ ಭಾಗದಲ್ಲಿ ಪ್ರಥಮವಾಗಿದ್ದು, ದೇಶದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಹೇಳಿದರು.

ಕಛೇರಿ ಸ್ಥಳ, ಉಪಕರಣಗಳು, ಮಾರ್ಗದರ್ಶನ, ಯೋಜನೆಯ ಪರೀಕ್ಷೆ, ಮೌಲ್ಯಮಾಪನ, ಪ್ರಮಾಣೀಕರಣ, ನಿಧಿಯನ್ನು ಒಳಗೊಂಡಿರುತ್ತದೆ. ರಾಜ್ಯ ಮತ್ತು ದೇಶದಲ್ಲಿರುವ ಇತರ ಸ್ಟಾರ್ಟ ಅಪ್‌ಗಳಿಗೆ, ಹೂಡಿಕೆದಾರರು ಮತ್ತು ಆರೋಗ್ಯ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಕೂಡ ಒದಗಿಸಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಕಚ್ಚಾ-ವಸ್ತುಗಳು ಮತ್ತು ಸಲಕರಣೆಗಳ ಪೂರೈಕೆದಾರರಂತಹ ಪೂರೈಕೆ ಸರಪಳಿಯೊಂದಿಗೆ ಇತರ ವ್ಯಾಪಾರದ ಬೆಳವಣಿಗೆಗೆ ಬೆಂಬಲ ನೀಡಲಿದೆ. ಹೊಸ ಉತ್ಪನ್ನಗಳು ಮತ್ತು ಸೇವೆಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಠಿಸಬಹುದು. ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸಿ, ದೇಶದ ರಫ್ತು ಸಾಮರ್ಥ್ಯವನ್ನು ವಿಸ್ತರಿಸಬಹುದು ಎಂದು ಹೇಳಿದರು.

ಮೆಡಿಟೆಕ್ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಸಂಪನ್ಮೂಲಗಳು ಕ್ರೋಡಿಕರಣ ಮತ್ತು ನಾವಿನ್ಯತೆಗಳಿಗೆ ವೇಗ ನೀಡುವದಲ್ಲದೇ ಸುಧಾರಿತ ಆರೋಗ್ಯ ಮತ್ತು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆಯೊಂದಿಗೆ ಜಾಗತಿಕ ಆಋಥಿಕತೆಯನ್ನು ಸ್ಫರ್ಧೆಯನ್ನು ಹೆಚ್ಚಿಸಲಿದೆ. ಹೂಡಿಕೆದಾರರು ಯಾವಾಗಲೂ ನವೀನ ಕಂಪನಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದು, ಅವರನ್ನು ಮೆಡ್ಟೆಕ್ ವಲಯದಲ್ಲಿ ಹೂಡಲು ಆಕರ್ಷಿಸಲು ಸಹಾಯ ಮಾಡುತ್ತದೆ. ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು, ಅಭಿವೃದ್ದಿಹೊಂದಲು ಮತ್ತು ಯಶಸ್ವಿಯಾಗಲು ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸಲು ವೇದಿಕೆಯನ್ನು ಕಲ್ಪಿಸುತ್ತದೆ. ಕೆಐಐಸಿಯು ಐಐಟಿ ಕಾನ್ಪುರ ಮತ್ತು ಇತರರೊಂದಿಗೆ ಪಾಲುದಾರಿಕೆಯನ್ನು ಹೊಂದಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ನಿತೀನ ಗಂಗಾನೆ, ಕುಲಪತಿ ಡಾ.ಎಂ.ಎಸ್‌.ಗಣಾಚಾರಿ, ಸಂಶೋಧನಾ ನಿರ್ದೇಶಕ ಡಾ.ವಿ.ಡಿ.ಪಾಟೀಲ, ಜೆಎನ್‌ಎಂಸಿ ಪ್ರಾಚಾರ್ಯ ಎನ್‌.ಎಸ್‌.ಮಹಾಂತಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.