ಸಾರಾಂಶ
ಕಲಬುರಗಿಗೆ ಮಂಜೂರಾಗಿರುವ ಉದ್ದೇಶಿತ ರೇಲ್ವೆ ವಲಯ ಸ್ಥಾಪನೆಗೆ ಆಗುತ್ತಿರುವ ವಿಳಂಬ ಕುರಿತು ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಸಂಸತ್ತಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಗೆ ಮಂಜೂರಾಗಿರುವ ಉದ್ದೇಶಿತ ರೇಲ್ವೆ ವಲಯ ಸ್ಥಾಪನೆಗೆ ಆಗುತ್ತಿರುವ ವಿಳಂಬ ಕುರಿತು ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಸಂಸತ್ತಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.ಸಂಸತ್ತಿನ ನಿಯಮ 377 ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕಲಬುರಗಿ ಲೋಕ ಸಭಾ ಕ್ಷೇತ್ರ ಕಲ್ಯಾಣ ಕರ್ನಾಟಕದ ಭಾಗವಾಗಿದ್ದು ಜಿಲ್ಲೆಗೆ ಸಂವಿಧಾನದ ಪರಿಚ್ಛೇದ 371( ಜೆ) ಅಡಿಯಲ್ಲಿ ವಿಶೇಷ ಸೌಲತ್ತು ನೀಡಲಾಗಿದೆ. ಆರ್ಥಿಕ ಸಮಾನ ಹಂಚಿಕೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ಸಮಾಜಿಕ ಸೂಚಕ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಈ ಸೌಲತ್ತು ಒದಗಿಸಲಾಗಿದೆ.
ಕಲಬುರಗಿ ಯಲ್ಲಿ ರೇಲ್ವೆ ವಲಯ ಸ್ಥಾಪನೆ ಮಾಡುವಂತೆ ಜನರು ಬಹಳ ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಅದರಂತೆ, ಒಂದು ದಶಕದ ಹಿಂದೆ, 2014-15 ರ ಮಧ್ಯಂತರ ಬಜೆಟ್ ನಲ್ಲಿ ರೇಲ್ವೆ ವಲಯ ಘೋಷಣೆಯಾಗಿ ಅದಕ್ಕೆ ಬೇಕಾಗುವ ರು.5 ಕೋಟಿ ಅನುದಾನ ಕೂಡಾ ಒದಗಿಸಲಾಗಿತ್ತು. ಜೊತೆಗೆ ರಾಜ್ಯ ಸರ್ಕಾರ ಈ ಯೋಜನೆಗೆ ಬೇಕಾಗುವ ಅಗತ್ಯ ಭೂಮಿಯನ್ನೂ ಉಚಿತವಾಗಿ ನೀಡಿತ್ತು. ಆದರೂ, ಕೂಡಾ ಈ ಭಾಗದ ಅಭಿವೃದ್ಧಿಗೆ ಪೂರಕವಾಗಿದ್ದ ರೇಲ್ವೆ ವಲಯ ಯೋಜನೆ ಜಾರಿಗೆಯಾಗದೆ ಸಾಕಷ್ಟು ವಿಳಂಬವಾಗಿದ್ದು ಇದರಿಂದ ಈ ಭಾಗದ ಜನರು ವಂಚಿತರಾಗಿದ್ದಾರೆ. ಇದನ್ನು ಗಮನಿಸಿದರೆ, ಈ ಭಾಗದ ಜನರ ಕಲ್ಯಾಣ ಹಾಗೂ ಅಭಿವೃದ್ಧಿಯ ವಿಚಾರವನ್ನು ಬಿಜೆಪಿ ಸರ್ಕಾರ ಪ್ರಥಮಾಧ್ಯತೆಯಾಗಿ ತೆಗೆದುಕೊಂಡಿಲ್ಲ ಎಂದು ಗೋಚರಿಸುತ್ತದೆ. ಹಾಗಾಗಿ, ಈ ಕೂಡಲೇ ಕಲಬುರಗಿ ಯಲ್ಲಿ ರೇಲ್ವೆ ವಲಯ ಸ್ಥಾಪನೆಗೆ ಬೇಕಾಗುವ ಅಗತ್ಯ ಕ್ರಮವನ್ನು ತೆಗೆದುಕೊಂಡು ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ಅವರು ಹೇಳಿದರು.