ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ಮೂರು ಪೀಠಗಳಿದ್ದು, ಇನ್ನೆರಡು ಪೀಠಗಳನ್ನು ಸ್ಥಾಪನೆ ಮಾಡುವ ಉದ್ದೇಶವಿದೆ. ಪಂಚಪೀಠಗಳಂತೆ ಪಂಚಮಸಾಲಿ ಸಮಾಜಕ್ಕೂ ಐದು ಪೀಠಗಳು ಬೇಕು ಎಂದು ಮಾಜಿ ಸಚಿವ ಉದ್ಯಮಿ ಮುರುಗೇಶ ನಿರಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ಮೂರು ಪೀಠಗಳಿದ್ದು, ಇನ್ನೆರಡು ಪೀಠಗಳನ್ನು ಸ್ಥಾಪನೆ ಮಾಡುವ ಉದ್ದೇಶವಿದೆ. ಪಂಚಪೀಠಗಳಂತೆ ಪಂಚಮಸಾಲಿ ಸಮಾಜಕ್ಕೂ ಐದು ಪೀಠಗಳು ಬೇಕು ಎಂದು ಮಾಜಿ ಸಚಿವ ಉದ್ಯಮಿ ಮುರುಗೇಶ ನಿರಾಣಿ ತಿಳಿಸಿದರು.ನಗರದ ಪಂಚಮಸಾಲಿ ಸಭಾಭವನದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ನೌಕರರ ಸಮಾವೇಶ ಹಾಗೂ ಸಾಧಕ ನೌಕರರ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡ ಸಮಾಜಕ್ಕೆ ಸ್ಪಂದಿಸಲು ಅನುಕೂಲ ವಾಗುವಂತೆ ಐದು ಪೀಠ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಸಮಾಜದ ಸಂಖ್ಯೆಗೆ ಅನುಗುಣವಾಗಿ ರಾಜಕಾರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸೌಲತ್ತು ದೊರೆಯಬೇಕಿದೆ. ಕೇವಲ ಶೇ.2ರಷ್ಟಿರುವ ಸಮಾಜದವರು ಐಎಎಸ್‌, ಐಪಿಎಸ್‌ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಶೇ.50ರಷ್ಟಿದ್ದಾರೆ. ಸಮಾಜದ ಮಕ್ಕಳು ಪರಿಶ್ರಮ ಪಟ್ಟು ಸಾಧನೆ ಮಾಡಬೇಕು ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ 10ಲಕ್ಷ ಜನ ನೌಕರರಿದ್ದಾರೆ. ಯಾರಿಗಾದರೂ ತೊಂದರೆ ಆದರೆ ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕೆಂದು ಹೇಳಿದರು. ಸಮಾಜದಲ್ಲಿಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಉನ್ನತ ವ್ಯಾಸಾಂಗಕ್ಕೆ ಅನುಕೂಲ ಮಾಡಿಕೊಡುವ ಕೆಲಸವಾಗಬೇಕು ಎಂದು ಹೇಳಿದರು.

ರಾಣಿ ಚೆನ್ನಮ್ಮ ವಿವಿಯ ಉಪಕುಲಪತಿ ಸಂತೋಷ ಕಾಮಗೌಡ ವಿಶೇಷ ಉಪನ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಕುಂಚನೂರು ಕಮರಿಮಠದ ಸಿದ್ದಲಿಂಗ ದೇವರು, ಧರಿದೇವರ ಮಠ ಆಲಗೂರಿನ ಲಕ್ಷ್ಮಣ ಮುತ್ಯಾ, ಸಂಘದ ಅಧ್ಯಕ್ಷ ಮಾಂತೇಶ ನರಸನಗೌಡರ, ಕಿತ್ತೂರಿನ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಮಹೇಶ ಚೆನ್ನಂಗಿ, ನಗರಸಭೆ ಮಾಜಿ ಅಧ್ಯಕ್ಷ ಈಶ್ವರ ವಾಳೆಣ್ಣವರ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಸಾಧಕ ನೌಕರರನ್ನು ಸನ್ಮಾನಿಸಲಾಯಿತು.