ಸಾರಾಂಶ
ಕೋರಮಂಡಲ್ ಸಕ್ಕರೆ ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿರುವ ಕಾರಣ ಈಗಾಗಲೇ ಇಲ್ಲಿ ಪರಿಸರ ಮಾಲಿನ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾರುಬೂದಿ ಸಮಸ್ಯೆ, ತ್ಯಾಜ್ಯ ನೀರಿನ ಸಮಸ್ಯೆಗಳು ಈ ಭಾಗದ ಜನರನ್ನು ಕಾಡುತ್ತಿವೆ. ಈ ಮಧ್ಯೆ ಆರಂಭಿಸಲು ಹೊರಟಿರುವ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕಗಳು ಪರಿಸರಕ್ಕೆ ಹಾನಿಕಾರಕವಾಗುತ್ತವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಆರಂಭಿಸಲು ಹೊರಟಿರುವ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕಗಳು ಪರಿಸರಕ್ಕೆ ಹಾನಿಕಾರಕವಾಗಿದ್ದರೂ ಮಾ.6 ರಂದು ಜನಾಭಿಪ್ರಾಯ ಸಭೆ ಕರೆದಿರುವುದನ್ನು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಖಂಡಿಸಿದರು.ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಧಿಕಾರಿಗಳು ಕಾರ್ಖಾನೆ ಪರನಿಂತು ಮಾ.6 ರಂದು ಸಭೆ ಕರೆದಿರುವುದನ್ನು ತಕ್ಷಣವೇ ರದ್ದುಪಡಿಸುವಂತೆ ಆಗ್ರಹಿಸಿದರು.
ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿರುವ ಕಾರಣ ಈಗಾಗಲೇ ಇಲ್ಲಿ ಪರಿಸರ ಮಾಲಿನ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾರುಬೂದಿ ಸಮಸ್ಯೆ, ತ್ಯಾಜ್ಯ ನೀರಿನ ಸಮಸ್ಯೆಗಳು ಈ ಭಾಗದ ಜನರನ್ನು ಕಾಡುತ್ತಿವೆ ಎಂದರು.ಕಾರ್ಖಾನೆಯ ನೂತನ ಘಟಕಗಳಿಗೆ ಜನಾಭಿಪ್ರಾಯ ವಿರುದ್ಧವಾಗಿರುವುದು ಗೊತ್ತಿದ್ದರೂ ನ್ಯಾಯಾಲಯಕ್ಕೆ ನೀಡಿದ್ದ ಮಾತಿನಂತೆ ನಡೆದುಕೊಳ್ಳದೆ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಮುಂದಾಗಿದ್ದು ಇದು ಈ ಭಾಗದ ರೈತರ ಬದುಕಿಗೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದರು.
ಕಾರ್ಖಾನೆಯಲ್ಲಿ ನೂತನ ಘಟಕಗಳ ಸ್ಥಾಪನೆಯಿಂದ ಹೇಮಾವತಿ ನದಿ ಮತ್ತು ಸುತ್ತಮುತ್ತಲ ಪರಿಸರದ ಮೇಲಾಗುವ ದುಷ್ಪರಿಣಾಮ ಅಧ್ಯಯನ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದ್ದ ಪರಿಸರ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಮರೆತು ಕಾರ್ಖಾನೆ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಡಿಸ್ಟಿಲರಿ ಸ್ಥಾಪಿಸಲು ಅನುವು ಮಾಡಿಕೊಡುವ ಏಕೈಕ ದುರುದ್ದೇದಿಂದ ಮಾ.6 ರಂದು ಜನಾಭಿಪ್ರಾಯ ಸಂಗ್ರಹದ ಹೆಸರಿನಲ್ಲಿ ಸಾರ್ವಜನಿಕ ಸಭೆ ಕರೆದಿದೆ. ಇದು ಹಸಿರು ನ್ಯಾಯಪೀಠಕ್ಕೆ ತೋರಿಸುತ್ತಿರವ ಅಗೌರವವಾಗಿದೆ. ಕೂಡಲೇ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಸರ ಸಂರಕ್ಷಣೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಕರೋಟಿ ತಮ್ಮಯ್ಯ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕೃಷ್ಣೇಗೌಡ ಇದ್ದರು.