ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇವೆ, ಪ್ರತಿ ಹಳ್ಳಿಯ ಜನರ ಸಮಸ್ಯೆಗಳನ್ನು 30ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ ಆಲಿಸಿದ್ದೇವೆ. ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. 700 ಜನರಿಗೆ ಪೆನ್ಷನ್ ಬರುವ ವ್ಯವಸ್ಥೆ ಮಾಡಿಸಿದ್ದೇವೆ, 250 ಕ್ಕೂ ಹೆಚ್ಚು ಸರ್ವೆಗಳನ್ನು ಮುಗಿಸಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸರ್ಕಾರಿ ಬಸ್ಸು ಸದ್ದೇ ಕೇಳದ 4 ಹಳ್ಳಿಗಳಿಗೆ ಬಸ್ಸು ವ್ಯವಸ್ಥೆಯನ್ನು ಕಲ್ಪಿಸಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿಗಳ ಕೋರ್ಟ್ ಆವರಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾರು ರಸ್ತೆಯ ಪರಿಚಯವೇ ಇಲ್ಲದ ಕೆಲವು ಹಳ್ಳಿಗಳಿಗೆ ರಸ್ತೆ ಹಾಕಿಸಲು ಅನುದಾನವನ್ನು ತಂದಿದ್ದೇವೆ. ಶಿಥಿಲಗೊಂಡ ಸರ್ಕಾರಿ ಶಾಲೆಗಳ ರಿಪೇರಿ,ನೂತನ ಶಾಲಾ ಕಟ್ಟಡಗಳು, ನೂತನ ಅಂಗನವಾಡಿ ಕಟ್ಟಡಗಳು, ಅಂಬೇಡ್ಕರ್ ಭವನಗಳು, ವಾಲ್ಮೀಕಿ ಭವನಗಳಿಗೆ ಶಂಕು ಸ್ಥಾಪನೆ ಮಾಡಿದ್ದೇನೆ ಎಂದರು.
ಬಾಬೂಜಿ ಭವನ ನಿರ್ಮಾಣಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತವಾದ ಬಾಬು ಜಗಜೀವನರಾಮ್ ಭವನದ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ 4 ಕೋಟಿ ರೂಗಳನ್ನು ನೀಡಿದೆ. ಮಂಚೇನಹಳ್ಳಿಯ ನೂತನ ಬಸ್ಸು ನಿಲ್ದಾಣಕ್ಕೆ 2 ಕೋಟಿ ರೂಗಳ ಅನುದಾನವನ್ನು ತಂದಿದ್ದೇವೆ. ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದ್ದ ದಿನ್ನೆಹೊಸಹಳ್ಳಿ ರಸ್ತೆ, ಇನಿಮಿಂಚಿನಹಳ್ಳಿ ರಸ್ತೆ, ಜಡಲ ತಿಮ್ಮನಹಳ್ಳಿ ರಸ್ತೆ, ಮುನ್ನೂರು ರಸ್ತೆಗಳಿಗೆ ಮುಕ್ತಿ ನೀಡುತ್ತಿದ್ದೇವೆ ಎಂದರು.ಸಚಿವ ಡಾ.ಎಂ.ಸಿ.ಸುಧಾಕರ್ ರವರ ಸಹಕಾರದಿಂದ ತಾಲ್ಲೂಕಿನ ನಂದಿ ಕ್ರಾಸ್ ಬಳಿ ಸುಸಜ್ಜಿತವಾದ ಹೂವಿನ ಮಾರುಕಟ್ಟೆಗೆ 20 ಎಕರೆ ಜಾಗ ಮೀಸಲಿಟ್ಟಿದ್ದೇವೆ. 2027ರ ಒಳಗೆ ಎತ್ತಿನಹೊಳೆಯ ಗಂಗಾಮಾತೆ ಚಿಕ್ಕಬಳ್ಳಾಪುರಕ್ಕೆ ಹರಿಯಲಿದ್ದಾಳೆ ಎಂದರು.
10ನೇ ತರಗತಿ ಮಕ್ಕಳಿಗೆ ಪರೀಕ್ಷೆಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಪರೀಕ್ಷೆಗಳನ್ನು ನಿರ್ವಹಿಸುತ್ತಿದ್ದು, ಪ್ರತಿ ದಿನದ ಉತ್ತರ ಪತ್ರಿಕೆಯನ್ನು ಅಂತರ್ ಶಾಲೆ ಮೌಲ್ಯ ಮಾಪನ ಮಾಡಿಸುತ್ತಿದ್ದೇವೆ. ತಂದೆ-ತಾಯಿ ಇಲ್ಲದ 52 ಅನಾಥ ಮಕ್ಕಳಿಗೆ ತಲಾ 1ಲಕ್ಷ ರೂ.ಗಳನ್ನು ಡಿಪಾಸಿಟ್ ಮಾಡಿದ್ದೇನೆ. ಕಳೆದೆರಡು ವರ್ಷದಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ನನ್ನ ಕ್ಷೇತ್ರದ ಎಲ್ಲಾ ಮಾತೆಯರು, ಸಹೋದರಿಯರಿಗೆ ಅರಿಶಿನ ಕುಂಕುಮದೊಂದಿಗೆ ಸೀರೆಗಳ ವಿತರಣೆ, 20,000 ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಬಟ್ಟೆ ವಿತರಣೆ, 5,000 ಅಂಗನವಾಡಿ ಮಕ್ಕಳಿಗೆ ಬಟ್ಟೆ ವಿತರಣೆ, ಸ್ಕಾಲರ್‌ಶಿಪ್ ವಿತರಣೆ ಇವುಗಳು ನನ್ನ ವೈಯಕ್ತಿಕ ಕಾರ್ಯಕ್ರಮಗಳು ಎಂದರು.
ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಅನಿಲ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಇದ್ದರು.