ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಕೆರೆ ಪ್ರದೇಶದಲ್ಲಿ ಯಾವುದೇ ಮನೆ, ಶೆಡ್ ಸೇರಿದಂತೆ ಯಾವುದೇ ಕಟ್ಟಡಗಳನ್ನು ಯಾರೂ ಕಟ್ಟುವಂತಿಲ್ಲ ಎನ್ನುವ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ಪಟ್ಟಣದ ಕೆರೆ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದಾರೆ. ಆ ಕಾರಣಕ್ಕೆ ಇಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಇತ್ತೀಚೆಗೆ ತೆರವುಗೊಳಿಸಿ ಆದೇಶ ಪಾಲನೆ ಮಾಡಲಾಗಿದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ವೆ ೪೧೬ರ ಕೆರೆಯ ಭೂಮಿ ೩೫ ಎಕರೆಗೂ ಅಧಿಕವಿದೆ. ಸುಪ್ರೀಂಕೋರ್ಟ್ ಆದೇಶ, ಜಿಲ್ಲಾಧಿಕಾರಿಗಳ ಸ್ಪಷ್ಟ ಆದೇಶದನ್ವಯ ಕೆರೆಯ ಜಾಗೆ ರಕ್ಷಿಸಿ, ಸರ್ಕಾರಿ ಆಸ್ತಿಯನ್ನು ಉಳಿಸಲಾಗುವುದು. ಈಚೆಗೆ ಅನಧಿಕೃತವಾಗಿ ಹಾಕಿದ್ದ ಶೆಡ್‌ಗಳನ್ನು ಜ.೯ರಂದು ತೆರವುಗೊಳಿಸಲಾಗಿದೆ. ಅತಿಕ್ರಮಣಕ್ಕೆ ಆಸ್ಪದ ನೀಡುವುದಿಲ್ಲ. ಕೆರೆ ಸ್ಥಳವನ್ನು ಸಂರಕ್ಷಿಸುವಲ್ಲಿ ಪಟ್ಟಣದ ನಾಗರಿಕರೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಯರಡೋಣ ಗ್ರಾಮದ ಬಳಿಯ ಸರ್ವೆ ನಂ. ೧೯೯ರಲ್ಲಿ ೧೩ ಎಕರೆ ಸರ್ಕಾರಿ ಭೂಮಿ ಲಭ್ಯವಾಗಿದೆ. ಇದೇ ಜಾಗೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.ದೇವಿಕ್ಯಾಂಪ್‌ನ ಸರ್ವೆ ನಂ. ೧೬೦ರ ದೇವಿಗುಡ್ಡದ ಒಟ್ಟು ೧೨೫ ಎಕರೆಯಲ್ಲಿ ವಾಸಿಸಲು ಯೋಗ್ಯವಿರುವ ಭೂಮಿ ಕೆಲ ಪ್ರಮಾಣದಲ್ಲಿದೆ. ಸುಮಾರು ೧೫ ಎಕರೆ ಪ್ರದೇಶದಲ್ಲಿ ಫಾರ್ಮ್‌ಹೌಸ್, ಹಂದಿ ಸಾಕಾಣಿಕೆಗೆ ಕೆಲವರು ಬಳಸುತ್ತಿದ್ದಾರೆ. ಅವರನ್ನು ತೆರವುಗೊಳಿಸಿ ಆ ಭೂಮಿಯಲ್ಲಿ ಅತಿಕ್ರಮಣದಿಂದ ನಿರ್ಗತಿಕರಾಗಿರುವ ಪಟ್ಟಣದ ಅನೇಕ ಕುಟುಂಬಗಳಿಗೆ ನಿವೇಶನ ನೀಡುವ ಜೊತೆಗೆ ಅಗತ್ಯ ಸೌಕರ್ಯ ಒದಗಿಸಲು ಕೆಲ ಪ್ರಮಾಣದ ಭೂಮಿ ಮೀಸಲಿಡಲಾಗುವುದು.
ಈಗಾಗಲೇ ಅನೇಕರು ವಾಸಿಸುತ್ತಿದ್ದು, ಅಕ್ರಮವಿರುವ ನಿವೇಶನಗಳನ್ನು ಶೀಘ್ರವೇ ಸಕ್ರಮಗೊಳಿಸಲಾಗುವುದು. ಸರ್ಕಾರ ಲ್ಯಾಂಡ್ ಬೀಟ್ ಆ್ಯಪ್ ಬಿಡುಗಡೆ ಮಾಡಿದ್ದು, ಇದರ ಸಹಾಯದಿಂದ ಸರ್ಕಾರಿ ಭೂಮಿಯ ಪತ್ತೆ ಸಲೀಸಾಗಲಿದೆ. ಇದರ ಮೂಲಕ ಕಾರ್ಯನಿರ್ವಹಣೆಗೆ ಶೀಘ್ರದಲ್ಲೇ ಗ್ರಾಮ ಆಡಳಿತಾಧಿಕಾರಿಗಳು ಮುಂದಾಗಬೇಕು. ಸರ್ಕಾರಿ ಭೂಮಿಯ ಪತ್ತೆಗೆ ಆ್ಯಪ್ ತುಂಬಾ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ವಿವರಿಸಿದರು.ಈ ವೇಳೆ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಇದ್ದರು.
ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ:ಜೂರಟಗಿ ಬಳಿಯ ಸರ್ವೆ ನಂ. ೨೬೫ರಲ್ಲಿ ೨೫ ಎಕರೆ ಸರ್ಕಾರಿ ಭೂಮಿ ಇರುವುದು ಪತ್ತೆಯಾಗಿದೆ. ಈ ೨೫ ಎಕರೆ ಭೂಮಿಯಲ್ಲಿ ಅರ್ಧದಷ್ಟು ಭೂಮಿಗೆ ಪಟ್ಟಾ ನೀಡಲಾಗಿದ್ದು, ಇದರಲ್ಲಿ ೧೨. ೧೫ ಎಕರೆ ಭೂಮಿ ಉಳಿದಿದೆ. ಜ. ೨೧ರಂದು ಭೂಮಿಯ ಹದ್ದುಬಸ್ತು ಕಾರ್ಯ ಮಾಡಲಾಗುವುದು. ಇದೇ ಭೂಮಿಯಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ), ನೌಕರರ ವಸತಿ ಗೃಹ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಪಟ್ಟಣ ಪ್ರದೇಶದಿಂದ ಕೂಗಳೆತ ದೂರದಲ್ಲಿ ಈ ಭೂಮಿ ಇರುವುದರಿಂದ ಆಡಳಿತ ನಿರ್ವಹಣೆಗೆ, ಜನ ಸಾಮಾನ್ಯರಿಗೆ ತಮ್ಮ ಕೆಲಸ-ಕಾರ್ಯಗಳಿಗೆ ತೆರಳಲು ಅನುಕೂಲವಾಗಲಿದೆ ಎಂದರು.