ಸಾರಾಂಶ
ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ರಾಜ್ಯ ಕಾಯಕಲ್ಪ ಮೌಲ್ಯಮಾಪನಾ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಕಾಯಕಲ್ಪ ಪ್ರಶಸ್ತಿ ನೀಡಲು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮನವಿ
ಕನ್ನಡಪ್ರಭ ವಾರ್ತೆ ಕನಕಗಿರಿಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಕಾಯಕಲ್ಪ ಮೌಲ್ಯಮಾಪನಾ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಮೌಲ್ಯ ಮಾಪನಾ ತಂಡದ ನೇತೃತ್ವ ವಹಿಸಿದ್ದ ಗದುಗಿನ ರವೀಂದ್ರ, ಬಳ್ಳಾರಿಯ ಸಂತೋಷಕುಮಾರ ಹಾಗೂ ಹುಬ್ಬಳ್ಳಿಯ ಬಸವರಾಜ ಆಸ್ಪತ್ರೆಯ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ಗಣಕಯಂತ್ರ ಕಚೇರಿ, ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಕೈಗೊಂಡ ಕ್ರಮಗಳು, ರೋಗಿಗಳ ಸೇವೆ ಸೇರಿದಂತೆ ನಾನಾ ಸೌಲಭ್ಯಗಳ ಕುರಿತು ಪರಿಶೀಲಿಸಿದರು.ಈ ಕುರಿತು ವೈದ್ಯ ರವೀಂದ್ರ ಮಾತನಾಡಿ, ರಾಜ್ಯ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೌಲ್ಯ ಮಾಪನ ಪ್ರಕ್ರಿಯೆ ನಡೆಯುತ್ತಿದೆ. ಕನಕಗಿರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ, ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ವಿಸ್ತರಣೆ ಕಾರ್ಯಕ್ರಮ, ಇತರೆ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದಾಗ ಉತ್ತಮ ಕಟ್ಟಡ ಹಾಗೂ ಸುವ್ಯವಸ್ಥಿತವಾಗಿರುವ ಈ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ಅಭಿವೃದ್ಧಿ ದೃಷ್ಟಿಯಿಂದ ಚುನಾಯಿತ ಪ್ರತಿನಿಧಿಗಳು ಶ್ರಮಿಸಬೇಕು ಎಂದರು.
ನಂತರ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮರಿಗುಂಡಪ್ಪ ಹೊನಗಡ್ಡಿ ಮಾತನಾಡಿ, ಆಸ್ಪತ್ರೆಗೆ ಬರುವ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದಾಗ ಸರ್ಕಾರಿ ಆಸ್ಪತ್ರೆ ಜನಮುಖಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕಾಯಕಲ್ಪ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು.ವಿವಿಧ ವಿಭಾಗಗಳಲ್ಲಿನ ದಾಖಲಾತಿ ಹಾಗೂ ರಿಜಿಸ್ಟರ್‌ಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಪಪಂ ಅಧ್ಯಕ್ಷೆ ಹುಸೇನಬಿ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ವೈದ್ಯರಾದ ಸಹನಾ, ಪವನ ಅರವಟಗಿಮಠ, ಬರಮಪ್ಪ ನಾಯಕ, ನೇತ್ರಾಧಿಕಾರಿ ಮುರ್ತುಜಾಸಾಬ, ಮೇಲ್ವಿಚಾರಕ ನವೀನ್, ಆಪ್ತ ಸಮಾಲೋಚಕರಾದ ಸಿದ್ರಾಮಪ್ಪ, ಅಮೀನಸಾಬ ಸೇರಿದಂತೆ ರಕ್ಷಾ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.