ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ 2025 ಜಾರಿಯಾಗಿದ್ದರೂ ಕೂಡ ಜಮೀನು ತಕರಾರು ಸಂಬಂಧ ಬಹಿಷ್ಕಾರಕ್ಕೆ ಒಳಗಾದ ಕುಟುಂಬಕ್ಕೆ ಬಹಿಷ್ಕಾರದಿಂದ ಮುಕ್ತಿ ಸಿಗದೆ ನ್ಯಾಯಕ್ಕಾಗಿ ಕುಟುಂಬವೊಂದು ಚಾಮರಾಜನಗರ ಜಿಲ್ಲೆಯಲ್ಲಿ ಅಂಗಲಾಚುತ್ತಿದೆ.

ನಮ್ಮ ಕುಟುಂಬದ ಜಮೀನನ್ನು ದಾಯಾದಿಗಳು ಪರಬಾರೆ ಮಾಡಿದ ಹಿನ್ನಲೆ ಪ್ರಶ್ನಿಸಿದ್ದ ಸಂಬಂಧ ಗ್ರಾಮದ ಯಜಮಾನರು 12ವರ್ಷ ಹಿಂದೆ ಬಹಿಷ್ಕಾರ ಹಾಕಿದ್ದಾರೆ. ಈಗಲೂ ಕೂಡ ಗ್ರಾಮದಲ್ಲಿ ನಮ್ಮೊಂದಿಗೆ ಮಾತನಾಡಬಾರದು ಮತ್ತು ನಮ್ಮನ್ನು ಜಾತ್ರೆ, ಹಬ್ಬಗಳು ಸೇರಿ ಯಾವುದೇ ಕಾರ್ಯಕ್ರಮಕ್ಕೂ ಕರೆಯಬಾರದು ಎಂದು ಬಹಿಷ್ಕಾರ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ಬಹಿಷ್ಕಾರಕ್ಕೆ ಒಳಗಾಗಿರುವ ಕೊಳ್ಳೇಗಾಲಮೋಳೆ ನಿವಾಸಿಗಳಾದ ಪ್ರಭುಸ್ವಾಮಿ, ನಾಗರಾಜಮ್ಮ ಸುದ್ದಿಗೋಷ್ಠಿಯಲ್ಲಿ ನೋವನ್ನು ತೋಡಿಕೊಂಡರು.

ಗ್ರಾಮದಲ್ಲಿ ನನಗೆ ಸೇರಿದ ಜಮೀನನ್ನು ನನ್ನ ಅಣ್ಣನ ಮಗ ಬೇರೆಯವರಿಗೆ ಪರಬಾರೆ ಮಾಡಿದ್ದಾರೆ ಎಂದು ತಿಳಿದು ಪ್ರಶ್ನಿಸಿದ್ದೇ. ಈ ಸಂಬಂಧ ನ್ಯಾಯ ಕೊಡಿಸುವಂತೆ ಗ್ರಾಮದ ಯಜಮಾನರ - ಬಳಿ ಮನವಿ ಮಾಡಿದ್ದೆ. ಆದರೆ, ಯಜಮಾನರು ಅಣ್ಣನ ಮಗನ ಪರ 2 ತೀರ್ಮಾನ ನೀಡಿದ್ದನ್ನು ಒಪ್ಪದಿದ್ದಕ್ಕೆ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿಸಿದರು.

ಬಹಿಷ್ಕಾರದಿಂದ ಗ್ರಾಮದಲ್ಲಿ ಯಜಮಾನರು, ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ನಮ್ಮ ಜೊತೆ ಮಾತನಾಡುವುದನ್ನು ಬಿಟ್ಟಿದ್ದರು ಇದರಿಂದ ಬೇಸತ್ತು ನಾವು ಊರು ಬಿಟ್ಟು ಹೋಗಿದ್ದೇವು ಮತ್ತೇ ಊರಿಗೆ ವಾಪಸ್‌ ಬಂದಿದ್ದರೂ ಬಹಿಷ್ಕಾರ ತೆಗೆದಿಲ್ಲ ಎಲ್ಲಿಯವರಿಗೆ ನಮಗೆ ಬಹಿಷ್ಕಾರ ಎಂದು ಕೇಳಿದರು.


ಬಹಿಷ್ಕಾರ ಕಾನೂನಿಗೆ ವಿರುದ್ದವಾಗಿದ್ದರೂ ಕೂಡ ಗ್ರಾಮದಲ್ಲಿ ಬಹಿಷ್ಕಾರ ಹಾಕಿರುವುದು ತಪ್ಪು ಎಂದು ಮುಖಂಡರೊಬ್ಬರು ಹೇಳಿದರೂ ಕೂಡ ಗ್ರಾಮಸ್ಥರು ಒಪ್ಪುತ್ತಿಲ್ಲ, ಈ ಬಹಿಷ್ಕಾರ ಸಂಬಂಧ ನಾವು ಪೊಲೀಸರಿಗೆ ದೂರು ನೀಡಿದ್ದರೂ ಯಾರು ಬಗೆಹರಿಸಿಲ್ಲ ಎಂದು ದೂರಿದ್ದಾರೆ.

ಬಹಿಷ್ಕಾರ ಸಂಬಂಧ 2026ರ ಜನವರಿ 26ರಂದು ಪೊಲೀಸರಿಗೆ ದೂರು ನೀಡಿದರೂ ನ್ಯಾಯ ಸಿಗದಿದ್ದರೆ ನಾವು ಎಲ್ಲಿ ನ್ಯಾಯ ಕೇಳುವುದು ಗೊತ್ತಿಲ್ಲ. ಬಹಿಷ್ಕಾರದಿಂದ ಮುಕ್ತಿ ಬೇಕಿದೆ ದಯವಿಟ್ಟು ಸಂಬಂಧಪಟ್ಟವರು ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು.