ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರು ಗ್ರಾಮೀಣ ಅಭಿವೃದ್ಧಿಗೆ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕ ಬಿ.ಪಿ ಹರೀಶ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾದೇವಪ್ಪ ನಿನಗೂ ಉಚಿತ, ಕಾಕಾ ಪಾಟೀಲ್‌ಗೂ ಉಚಿತ ಎಂದು ಹೇಳಿದರು. ಆದರೆ ಇವತ್ತು ಮಹಿಳೆಯರಿಗೆ ಮತ್ತು ನಿರುದ್ಯೋಗಿ ಯುವಕರಿಗೆ ಯಾವುದೇ ಗ್ಯಾರಂಟಿ ಹಣ ಬಿಡುಗಡೆ ಮಾಡುತ್ತಿಲ್ಲ. ಇತ್ತ ಬಡವರಿಗೂ ಹಣ ಇಲ್ಲ, ಅತ್ತ ಅಭಿವೃದ್ಧಿಗೂ ಅನುದಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರು ಅಭಿವೃದ್ಧಿಗೆ ಒಂದೇ ಒಂದು ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಯಾವ ಪುರುಷಾರ್ಥಕ್ಕೆ ಕೆಡಿಪಿ ಸಭೆ ನಡೆಸಬೇಕು. ಗ್ಯಾರಂಟಿ ನಿರ್ವಹಣೆ ಹಿಂದೆ ಬಿದ್ದಿರುವ ಸರ್ಕಾರ ಅಭಿವೃದ್ಧಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಲೆಬೆನ್ನೂರಿನ ಸರ್ಕಾರಿ ಶಾಲೆಯ ಕಟ್ಟಡ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ಶಾಲೆ ಕಟ್ಟಡ ತೆರವು ಮಾಡಿದವರ ವಿರುದ್ಧ ಪ್ರಕರಣ ದಖಾಲಿಸಿದ್ದಿರಾ ಎಂದು ಬಿಇಒ ಹನುಮಂತಪ್ಪರನ್ನು ಶಾಸಕರು ತರಾಟೆ ತೆಗೆದುಕೊಂಡರು. ಪ್ರಕರಣದ ಬಗ್ಗೆ ಡಿಡಿಪಿಐಗೆ ಮಾಹಿತಿ ನೀಡಲಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಲ್ಲ ಎನ್ನುವ ಸಿದ್ಧ ಉತ್ತರಕ್ಕೆ ಕೋಪಿತರಾದ ಶಾಸಕರು, ನಿಮ್ಮ ಆಸ್ತಿ ಯಾರಾದರೂ ಈ ರೀತಿ ಮಾಡಿದ್ದರೆ ಸುಮ್ಮನೆ ಇರುತ್ತಿರಾ ಎಂದು ಖಾರವಾಗಿ ಪ್ರಶ್ನಿಸಿದರು.
ಶಿಕ್ಷಣ ಇಲಾಖೆ ಅನುಮತಿಯಿಲ್ಲದೆ ಕಟ್ಟಡ ತೆರವು ಮಾಡಿರುವವರಲ್ಲಿ ಡಿಸಿ ಸೇರಿ ಯಾರೇ ಆಗಿರಲಿ ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ಬಿಇಒ ಹಾಗೂ ತಾಪಂ ಇಒಗೆ ತಾಕೀತು ಮಾಡಿ, ವಿಳಂಭವಾದರೆ ಸಹಿಸಲ್ಲ ಎಂದು ಎಚ್ಚರಿಸಿದರು.ಹರಿಹರ ನಗರಸಭೆ ವ್ಯಾಪ್ತಿ ಶೇ.೮೦ರಷ್ಟು ಬಡಾವಣೆಗಳು ನಿಯಮಾನುಸಾರ ನಿರ್ಮಾಣವಾಗಿಲ್ಲ ಇದರ ಪರಿಣಾಮ ನಿವಾಸಿಗಳು ಮನೆ ಕಟ್ಟಲು ಪರವಾನಿಗೆ ಸಿಗದೆ ಪರದಾಡುತ್ತಿದ್ದಾರೆ. ಗ್ರಾಮಗಳು ಬೆಳದಂತೆ ಗ್ರಾಮಠಾಣಾ ವ್ಯಾಪ್ತಿಯು ವಿಸ್ತರಿಸಬೇಕು. ಈ ಕೆಲಸ ಇದುವರೆಗೂ ಆಗಿಲ್ಲ, ಇದರಿಂದ ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಶುಕ್ರವಾರ ನಗರಸಭೆ, ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.
ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅರಣ್ಯ ಹಾಗೂ ಸಮಾಜಿಕ ಅರಣ್ಯ ಇಲಾಖೆಯಿಂದ ಅಂದಾಜು ಎಷ್ಟು ಸಸಿ ನೆಡಲಾಗಿದೆ ಎಂದು ಪ್ರಶ್ನೀಸಿದಾಗ ಇಲಾಖೆ ಅಧಿಕಾರಿ ಅಂದಾಜು ೯೦ ಲಕ್ಷ ವಿರಬಹುದು ಎಂದು ಉತ್ತರಿಸಿದರು. ನೀವು ನೆಟ್ಟಿರುವ ಮರಗಳಲ್ಲಿ ಶೇಕಡ ಒಂದು ರಷ್ಟು ಗಿಡಗಳು ಬೆಳೆದಿದ್ದರೆ ಇಂದು ಹರಿಹರ ತಾಲೂಕು ಸಂಪೂರ್ಣ ಹಸಿರು ಮಯಾವಾಗುತ್ತಿತ್ತು ಎಂದು ಹೇಳುವ ಮೂಲಕ ಅದೇ ಗುಂಡಿ ಅದೇ ಗಿಡ ಎನ್ನುವ ಲೆಕ್ಕ ಇದೆ ನಿಮ್ಮ ಆತ್ಮ ಪರೀಕ್ಷಿಸಿಕೊಳ್ಳಿ ಎಂದು ಅಧಿಕಾರಿಗೆ ಸೂಚನೆ ನೀಡಿದರು..ಕಾರ್ಮಿಕ ಇಲಾಖೆ ನೋಂದಾಯಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನೆಪದಲ್ಲಿ ರಾಜ್ಯಾದ್ಯಂತ ಕೋಟ್ಯಾಂತರರೂ ಲೂಟಿಯಾಗಿದೆ ಎನ್ನುವ ಮಾಹಿತಿ ಇದೆ. ಇದರಲ್ಲಿ ಹರಿಹರನು ಸೇರಿದೆಯಾ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಿರೀಕ್ಷಕಿ ಕವಿತಾ ತಾಲೂಕಿನಲ್ಲಿ ಅಂದಾಜು ೪೫೦೦ ಸಾವಿರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿಯಿದೆ. ತಪಾಸಣೆ ವಿಷಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲ ಎಂದು ಹೇಳುತ್ತಿದ್ದಂತೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಅಂದರೆ ಏನು ಅರ್ಥ ಎಂದ ಶಾಸಕರು ಕೂಡಲೇ ಮೇಲಾಧಿಕಾರಿಗಳಿಗೆ ಗಮನಕ್ಕೆ ತರುವಂತೆ ಇಒ ರಾಮಕೃಷ್ಣಪ್ಪಗೆ ಸೂಚಿಸಿದರು.ರಾಜ್ಯದಲ್ಲಿ ಡೆಂಘೀ ಪ್ರಕರಣ ತೀವ್ರತೆ ಪಡೆದು ಕೊಂಡಿದ್ದು ಈ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ೩ಕ್ಕೆ ತಹಸೀಲ್ದಾರ್, ತಾಪಂ ಇಒ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ನಗರಸಭೆ ಆಧಿಕಾರಿಗಳ ಸಭೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ತಹಸೀಲ್ದಾರ್ ಗುರು ಬಸವರಾಜ್, ಡಾ.ಸಿದ್ದೇಶ್, ಸಿಡಿಪಿಒ ಪೂರ್ಣಿಮಾ, ಬೆಸ್ಕಾಂ ನಾಗರಾಜ್ ನಾಯ್ಕ್, ಪಿಡಬ್ಲ್ಯೂಡಿ ಶಿವಮೂರ್ತಿ, ಜಿಪಂಗೀರಿಶ್, ಆರೋಗ್ಯ ಇಲಾಖೆಯ ಡಾ.ಖಾದರ್, ಸಾರ್ವಜನಿಕ ಆಸ್ಪತ್ರೆ ಡಾ.ಹನುಮನಾಯ್ಕ್, ವಾಲ್ಮೀಕಿ ನಿಗಮದ ಮಹಾವೀರ್ ಸಜ್ಜನ್, ನಗರಸಭೆ ಇಎಎ ತಿಪ್ಪೇಶಪ್ಪ ಸೇರಿ ಇತರೆ ಇಲಾಖೆ ಅಧಿಕಾರಿಗಳು ಇದ್ದರು.