ನಿಯಮ ಪಾಲಿಸದ ಇಟ್ಟಿಗೆ ತಯಾರಕರಿಗೀಗ ಸಂಕಷ್ಟ

| Published : Feb 13 2025, 12:45 AM IST

ಸಾರಾಂಶ

ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಈ ಬಾರಿ ಇಟ್ಟಿಗೆ ಭಟ್ಟಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಟ್ಟ ಇಟ್ಟಿಗೆಗಳಿಗೆ ತಾಲೂಕು ಹೆಚ್ಚಿನ ಪ್ರಸಿದ್ದಿ ಪಡೆದಿದ್ದು ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಸಿದ್ದವಾಗುವ ಇಟ್ಟಿಗೆಗಳು ರಾಜ್ಯರಾಜಧಾನಿಯವರಗೆ ತಲುಪುತ್ತಿವೆ.

ವಿದ್ಯಾ ಕಾಂತರಾಜ್‌

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಈ ಬಾರಿ ಇಟ್ಟಿಗೆ ಭಟ್ಟಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಟ್ಟ ಇಟ್ಟಿಗೆಗಳಿಗೆ ತಾಲೂಕು ಹೆಚ್ಚಿನ ಪ್ರಸಿದ್ದಿ ಪಡೆದಿದ್ದು ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಸಿದ್ದವಾಗುವ ಇಟ್ಟಿಗೆಗಳು ರಾಜ್ಯರಾಜಧಾನಿಯವರಗೆ ತಲುಪುತ್ತಿವೆ. ಇಂತಹ ಇಟ್ಟಿಗೆ ಭಟ್ಟಿಗಳ ಮೇಲೆ ಈಗ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿರುವುದು ಇಟ್ಟಿಗೆ ಭಟ್ಟಿ ಮಾಲೀಕರಿಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕಿನ ಹೇಮಾವತಿ ಹಿನ್ನೀರು ಪ್ರದೇಶದ ಹಲವೆಡೆ ಸಾಕಷ್ಟು ದಶಕಗಳಿಂದ ಇಟ್ಟಿಗೆ ಭಟ್ಟಿಗಳು ಯಾವುದೇ ನಿಯಮಗಳು ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದವು. ಪ್ರತಿವರ್ಷ ೧೫ ಕೋಟಿಗೂ ಅಧಿಕ ಇಟ್ಟಿಗೆಗಳು ಇಲ್ಲಿ ಸಿದ್ದಗೊಂಡು ಅನ್ಯಪ್ರದೇಶಗಳಿಗೆ ರವಾನೆಯಾಗುತ್ತಿವೆ. ಆದರೆ, ಹೀಗೆ ಕೊಟ್ಯಾಂತರ ಇಟ್ಟಿಗೆಗಳ ಉತ್ಪಾದಿಸುವ ಇಟ್ಟಿಗೆ ಭಟ್ಟಿ ಮಾಲೀಕರು ಸರ್ಕಾರದ ಯಾವುದೇ ನಿಯಮ ಪಾಲಿಸದಿರುವುದು ಬಹಿರಂತ ಸತ್ಯವಾಗಿತ್ತು.

ಇಟ್ಟಿಗೆ ಉತ್ಪಾದನೆಗೆ ಹೇಮಾವತಿ ಹೀನ್ನಿರು ಪ್ರದೇಶದ ಮಣ್ಣು ಅಚ್ಚಮೆಚ್ಚು. ಇಲ್ಲಿ ಮಣ್ಣು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವನಾಗಿ ಪಡೆಯವುದು ಕಡ್ಡಾಯವಾಗಿದೆ. ಈ ಇಲಾಖೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಮಣ್ಣು ಗಣಿಗಾರಿಕೆಗೆ ಅವಕಾಶ ನೀಡಿದ್ದರು. ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸುವುದು ತೀರ ಕಷ್ಟಕರ. ಅಲ್ಲದೆ ಹಿನ್ನೀರು ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿಗಳ ಸ್ಥಾಪನೆಗೆ ನಿರ್ಭಂದ ಹೇರಲಾಗಿದೆ. ಆದ್ದರಿಂದ ಖಾಸಗಿ ಸ್ಥಳದಲ್ಲಿ ಇಟ್ಟಿಗೆ ಭಟ್ಟಿಗಳ ಸ್ಥಾಪನೆ ಮಾಡಬೇಕಿದೆ. ಆದರೆ, ಖಾಸಗಿ ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿ ಸ್ಥಾಪನೆಗೆ ಭೂಮಿ ಅನ್ಯಸಂಕ್ರಮಣಗೊಳ್ಳಬೇಕಿದೆ. ಆದರೆ, ಖಾಸಗಿ ವ್ಯಕ್ತಿಗಳು ತಮ್ಮ ಭೂಮಿಯನ್ನು ಅನ್ಯ ಸಂಕ್ರಮಗೊಳಿಸಲು ಅವಕಾಶ ನೀಡುತ್ತಿಲ್ಲ. ಪರಿಣಾಮ ಇಟ್ಟಿಗೆ ಉತ್ಪಾದನೆ ಮಾಡುವುದು ಕಬ್ಬಿಣದ ಕಡಲೆಯಾಗಿದೆ. ಸೌದೆಗೂ ಸಮಸ್ಯೆ: ಇಟ್ಟಿಗೆ ಉತ್ಪಾದನೆಗಾಗಿ ಪ್ರತಿವರ್ಷ ೨.೫ ಲಕ್ಷ ಟನ್ ಸೌದೆಗಳನ್ನು ಉರುವಲಾಗಿ ಬಳಸುತ್ತಿದ್ದು, ಮರ ಕಡಿಯಲು ಪರವಾನಗಿ ಪಡೆದು ಇಟ್ಟಿಗೆ ಉತ್ಪಾದನೆಗೆ ಬಳಸಲು ಅವಕಾಶ ನೀಡಲಾಗಿದೆ. ಆದರೆ, ಎಲ್ಲಾ ವಿಧದ ಮರಗಳನ್ನು ಸೌದೆಗಳನ್ನಾಗಿ ಪರಿವರ್ತಿಸಿ ಇದುವರಗೆ ಇಷ್ಟು ಪ್ರಮಾಣದ ಉರುವಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸೌದೆ ಸಾಗಟಗಾರರ ನಡುವಿನ ಹೊಂದಾಣಿಕೆಯಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆದರೆ, ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು ಸೌದೆ ಸಾಗಾಟದ ಅಕ್ರಮಕ್ಕೆ ಕಡಿವಾಣ ಹಾಕಿದ್ದು ಪರವಾನಗಿ ಪಡೆದು ಸೌದೆ ಸಾಗಾಟ ಮಾಡುವಂತೆ ಸೂಚಿಸಿದೆ. ಇದರಿಂದಾಗಿ ಇಟ್ಟಿಗೆ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು ಕಾನೂನ್ಮಾತಕವಾಗಿ ಇಟ್ಟಿಗೆ ಉತ್ಪಾದಿಸುವವರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಸಿದ್ದಗೊಂಡಿರುವ ಇಟ್ಟಿಗೆ ಸುಡಲು ಪರವಾನಗಿ ಹೊಂದಿರುವ ಉತ್ತಮ ಜಾತಿಯ ಮರಗಳನ್ನೆ ಬಳಸುವುದು ಅನಿವಾರ್ಯವಾಗಿದೆ. ತಾಲೂಕಿನಲ್ಲಿ ಪ್ರತಿವರ್ಷ ಸುಮಾರು ೨೩೦ ಕ್ಕೂ ಅಧಿಕ ಜನರು ಇಟ್ಟಿಗೆ ಉತ್ಪಾದನೆಯಲ್ಲಿ ತೊಡಗುತ್ತಿದ್ದರು. ಆದರೆ, ಈ ಬಾರಿ ತಾಲೂಕು ಆಡಳಿತದ ಬಿಗಿ ನಿಲುವು ಸಾಕಷ್ಟು ಜನರು ಈ ಉದ್ಯಮದಿಂದ ಹಿಂದೆ ಸರಿಯುವಂತೆ ಮಾಡಿದೆ. ಪರಿಣಾಮ ಅಳಿದುಳಿದ ಇಟ್ಟಿಗೆ ಭಟ್ಟಿಗಳಲ್ಲಿ ಉತ್ಪಾದನೆಯಾಗುವ ಇಟ್ಟಿಗೆಗಳಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕಳೆದ ವರ್ಷಂತ್ಯಾಕ್ಕೆ ೫ ರಿಂದ ೬ ರು.ಗಳಿದ್ದ ಇಟ್ಟಿಗೆಗಳ ಬೆಲೆ ಪ್ರಸಕ್ತ ವರ್ಷದ ಆರಂಭದಲ್ಲೆ ೮ ರಿಂದ ೯ ರು.ಗಳಿಗೆ ತಲುಪಿದೆ.

ನಿಯಮ ಬಾಹಿರವಾಗಿ ಸೌದೆ ಸಾಗಾಟಕ್ಕೆ ನಾವು ಅವಕಾಶ ನೀಡುತ್ತಿಲ್ಲ. ಪರವಾನಗಿ ಪಡೆದ ಮರಗಳ ಕಡಿತಲೆಗಳನ್ನು ಮಾತ್ರ ಸಾಗಾಟಕ್ಕೆ ಅವಕಾಶ ನೀಡಲಾಗಿದೆ.

ಹೇಮಂತ್. ವಲಯ ಅರಣ್ಯಾಧಿಕಾರಿ.

ನಿಯಮ ಬಾಹಿರವಾಗಿ ಇಟ್ಟಿಗೆ ಸಿದ್ದಪಡಿಸುವವರ ವಿರುದ್ಧ ತಾಲೂಕು ಆಡಳಿತ ನೋಟಿಸ್ ನೀಡುತ್ತಿದೆ. ನೋಟಿಸ್‌ಗೆ ಉತ್ತರ ನೀಡದ ಉದ್ಯಮಿಗಳ ವಿರುದ್ಧ ಕಠಿಣ ನಿಯಮ ಜಾರಿಗೊಳಿಸಲಾಗುವುದು.

ಮೇಘನಾ ತಹಸೀಲ್ದಾರ್ (12ಎಚ್ಎಸ್ಎನ್12ಬಿ )ಇಟ್ಟಿಗೆ ಉತ್ಪಾದನೆಗೆ ಈ ಬಾರಿ ಹಲವು ಷರತ್ತುಗಳನ್ನು ಪೂರೈಸಬೇಕಾಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಜಮೀಲ್ ಆಹಮ್ಮದ್. ಇಟ್ಟಿಗೆ ಭಟ್ಟಿ ಮಾಲೀಕ.

ನಿಯಮ ಹೇಳುವುದೇನು?: ಹಿನ್ನೀರು ಪ್ರದೇಶದಲ್ಲಿ ಮಣ್ಣು ಗಣಿಗಾರಿಕೆ ನಡೆಸುವುದು ಹಾಗೂ ಇದೆ ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿಗಳ ಸ್ಥಾಪಿಸುವುದಕ್ಕೆ ಅವಕಾಶ ಇಲ್ಲ. ಇಟ್ಟಿಗೆ ಭಟ್ಟಿಗಳ ಕಾರ್ಯಚರಣೆಗೂ ಮುನ್ನ ಸಮೀಪದ ಗ್ರಾ.ಪಂ ಹಾಗೂ ಸಣ್ಣ ಕೈಗಾರಿಕೆಗಳಿಂದ ಪರವಾನಗಿ ಪಡೆಯಬೇಕು. ಪರವಾನಗಿ ಇಲ್ಲದೆ ಇಟ್ಟಿಗೆ ಭಟ್ಟಿಗಳಿಗೆ ನದಿಯಿಂದ ನೀರು ತೆಗೆದುಕೊಳ್ಳುವಂತಿಲ್ಲ ಎನ್ನುವುದು ಸೇರಿದಂತೆ ಹತ್ತಾರು ನಿಯಮಗಳಿವೆ. ಇಟ್ಟಿಗೆ ಭಟ್ಟಿ ಮಾಲೀಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆಂಬ ಸದ್ದು ಕೇಳಿ ಬಂದಾಗಲೆಲ್ಲ ಅಧಿಕಾರಿಗಳು ತಾತ್ಕಾಲಿಕವಾಗಿ ಇಟ್ಟಿಗೆ ಭಟ್ಟಿಗಳ ಮೇಲೆ ದಾಳಿ ಮಾಡುವುದು. ವಿಷಯ ಮರೆತ ನಂತರ ಇಟ್ಟಿಗೆ ಉತ್ಪಾದನೆಗೆ ಅವಕಾಶ ನೀಡವುದು ಪ್ರತಿವರ್ಷ ನಡೆಯುತ್ತಿದೆ. ಇಟ್ಟಿಗೆ ಭಟ್ಟಿ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಇದುವರೆಗೆ ಅನೈತಿಕ ಹೊಂದಾಣಿಕೆ ವ್ಯವಹಾರ ನಡೆಯುತ್ತಿದ್ದವು. ಪರಿಣಾಮ ಇದುವರಗೆ ನಿರಂತಕವಾಗಿ ಇಟ್ಟಿಗೆ ಉತ್ಪಾದನೆಯಾಗುತ್ತಿದ್ದವು. ಅಧಿಕಾರಿಗಳು ನೀಡಿದ ಸೂಚನೆ : ಸದ್ಯ ತಾಲೂಕು ಆಡಳಿತ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದು ಅನುಮತಿ ಇಲ್ಲದೆ ಹಿನ್ನೀರು ಪ್ರದೇಶದಿಂದ ಮಣ್ಣು ಗಣಿಗಾರಿಕೆ ನಡೆಸಬಾರದು, ಹಿನ್ನೀರು ಪ್ರದೇಶದಲ್ಲಿ ಇಟ್ಟಿಗೆ ಭಟ್ಟಿಗಳ ಸ್ಥಾಪಿಸಬಾರದು, ಅಕ್ರಮವಾಗಿ ನದಿಯಿಂದ ನೀರೆತ್ತಬಾರದು, ಮೂರು ಅಡಿಗಿಂತ ಆಳವಾಗಿ ಮಣ್ಣು ತೆಗೆಯಬಾರದು, ಖಾಸಗಿ ಸ್ಥಳದಲ್ಲಿ ಇಟ್ಟಿಗೆ ಉತ್ಪಾದನೆ ಮಾಡುವವರು ಇಟ್ಟಿಗೆ ಉತ್ಪಾದನೆ ಮಾಡುವ ಪ್ರದೇಶವನ್ನು ಅನ್ಯ ಸಂಕ್ರಮಣಗೊಳಿಸಬೇಕು. ಸಣ್ಣ ಕೈಗಾರಿಕೆ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬೆಲ್ಲ ನಿಯಮ ರೂಪಿಸಿದ್ದು ಈ ನಿಯಮಗಳನ್ನು ಉಲ್ಲಂಘಿಸಿದ ಇಟ್ಟಿಗೆ ಭಟ್ಟಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.