ರಾಮನಗರ: ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದೀರಾ. ನಿಮಗೆ ಡಿ.ಕೆ.ಶಿವಕುಮಾರ್ ಬೆಂಬಲವಾಗಿ ನಿಂತಿದ್ದರು. ಇವತ್ತು ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ನೀವು ಸಹಕಾರ ಕೊಡದಿದ್ದರು ಪರವಾಗಿಲ್ಲ. ಕೀಳು ಮಟ್ಟದ ಟೀಕೆ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು

ರಾಮನಗರ: ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದೀರಾ. ನಿಮಗೆ ಡಿ.ಕೆ.ಶಿವಕುಮಾರ್ ಬೆಂಬಲವಾಗಿ ನಿಂತಿದ್ದರು. ಇವತ್ತು ನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ನೀವು ಸಹಕಾರ ಕೊಡದಿದ್ದರು ಪರವಾಗಿಲ್ಲ. ಕೀಳು ಮಟ್ಟದ ಟೀಕೆ ನಿಲ್ಲಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ಫುಡ್ ಸ್ಟ್ರೀಟ್ , ಕ್ಲಾಕ್ ಟವರ್ ಮತ್ತು ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ಒಂದೂವರೆ ವರ್ಷ ಅವಕಾಶ ಇದೆ. ನಾಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಕುಮಾರಸ್ವಾಮಿರವರು ಕೀಳು ಮಟ್ಟದ ಟೀಕೆ ನಿಲ್ಲಿಸಬೇಕು. ಸಹಕಾರ ಕೊಡದಿದ್ದರು ಪರವಾಗಿಲ್ಲ ರಾಷ್ಟ್ರ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದರು.

ಈ ಜಿಲ್ಲೆಯಿಂದ ಕುಮಾರಸ್ವಾಮಿರವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸಾಂಪ್ರದಾಯಿಕವಾಗಿ ಬದ್ಧವೈರಿಗಳಾಗಿದ್ದರು ಕೂಡ ಡಿ.ಕೆ.ಶಿವಕುಮಾರ್ ರವರು ಕುಮಾರಸ್ವಾಮಿ ಅವರೊಂದಿಗೆ ಮೈತ್ರಿ ಸರ್ಕಾರ ರಚನೆಗೆ ಕೈಜೋಡಿಸಿದರು. ಕುಮಾರಸ್ವಾಮಿರವರ ಮುಖ್ಯಮಂತ್ರಿ ಸ್ಥಾನಕ್ಕೆ ಚ್ಯುತಿ ಬಾರದಂತೆ ಡಿ.ಕೆ.ಶಿವಕುಮಾರ್ ನಡೆದುಕೊಂಡರು. ಇದನ್ನು ಮರೆಯಬಾರದು ಎಂದರು.

ಅಸ್ಸಾಂನಲ್ಲಿ ಇಬ್ಬರು ಕೈ ಎತ್ತಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು. ಅವರಿಬ್ಬರನ್ನು ಜೋಡೆತ್ತು ಎಂದು ಕರೆಯುತ್ತಿದ್ದರು. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದು ನಮ್ಮ ಜಿಲ್ಲೆಯ ಗೌರವ ಎಂಬ ಭಾವನೆ ನಮ್ಮಲ್ಲಿಯೂ ಇತ್ತು. ಆದರೀಗ ಬದಲಾದ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದು ಹೆಮ್ಮೆ ಮತ್ತು ಗರ್ವದ ವಿಚಾರ ಎಂದು ಹೇಳಿದರು.

ರಾಜಕೀಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ರಾಜಕಾರಣ ಪ್ರಾರಂಭವಾದ ದಿನದಿಂದಲೂ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಬಾಲಕೃಷ್ಣ ಹಾಗೂ ನಮ್ಮೊಂದಿಗೆ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ, ಇವತ್ತಿನ ದಿನ ನಮ್ಮ ಜಿಲ್ಲೆಯ ಮಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಅವರ ಆಡಳಿತ ಕ್ಷಮತೆಯನ್ನು ಗೌರವಿಸಿ, ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂಬುದು ನಮ್ಮ ಕಳಕಳಿ ಎಂದರು.

ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿರವರು ಕೇಂದ್ರ ಸಚಿವರಾಗಿದ್ದಾರೆ. ಬಹಳಷ್ಟು ಕೆಲಸ ಕಾರ್ಯ ಮಾಡಲು ವಿಫುಲವಾದ ಅವಕಾಶಗಳಿವೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆಯಾಗಿ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಯಾದ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಜನರು ಗೌರವ ಇಟ್ಟುಕೊಂಡಿರುವ ವ್ಯಕ್ತಿಗಳೇ ಹೀಗೆ ನಡೆದುಕೊಂಡರೆ ನಗೆ ಪಾಟಿಲಿಕೆಗೆ ಗುರಿಯಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರಿಗೆ ಸಿ.ಪಿ.ಯೋಗೇಶ್ವರ್ ಎಚ್ಚರಿಕೆ ನೀಡಿದರು.

5ಕೆಆರ್ ಎಂಎನ್ 8.ಜೆಪಿಜಿ

ರಾಮನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ಫುಡ್ ಸ್ಟ್ರೀಟ್ , ಕ್ಲಾಕ್ ಟವರ್ ಮತ್ತು ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿದರು.