ಸಾರಾಂಶ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದರೂ ವಿಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ಅವರು ಹೋರಾಟ ಮಾಡಿಕೊಂಡಿರಲಿ, ಸತ್ಯಕ್ಕೆ ನ್ಯಾಯ ಸಿಕ್ಕಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಸಿಎಂ ಹುದ್ದೆ ಖಾಲಿ ಇಲ್ಲ, ರಾಜಣ್ಣ ಹೇಳಿದ್ದೇ ಅಂತಿಮವಲ್ಲ
ದಾವಣಗೆರೆ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದರೂ ವಿಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ಅವರು ಹೋರಾಟ ಮಾಡಿಕೊಂಡಿರಲಿ, ಸತ್ಯಕ್ಕೆ ನ್ಯಾಯ ಸಿಕ್ಕಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಪದವಿ, ಮುಖ್ಯಮಂತ್ರಿ ಪದವಿಗಳು ಖಾಲಿ ಇವೆಯಾ? ಅವು ಖಾಲಿಯಾದ ನಂತರ ನೂರಕ್ಕೆ ನೂರು ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಈಗ ಅವುಗಳ ಬಗ್ಗೆ ಮಾತನಾಡಿದರೆ ಅದು ಅಪ್ರಸ್ತುತ ಎನಿಸುತ್ತದೆ ಎಂದರು.
ಸಚಿವ ರಾಜಣ್ಣ ದೊಡ್ಡವರು. ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಣ್ಣ ಹೇಳಿದ್ದೇ ಅಂತಿಮವಾಗುವುದಿಲ್ಲ. ನಮ್ಮ ಪಕ್ಷದ ವರಿಷ್ಠರು ಅದನ್ನು ತೀರ್ಮಾನಿಸಿ, ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.ನನಗೂ ಸಿಎಂ ಆಗುವಾಸೆ, ಆಸೆ ಯಾರಿಗಿರಲ್ಲ?
ಅಧಿಕಾರ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ? ನನಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಸಂದರ್ಭ ಸಿಕ್ಕರೆ ನಾನೇನೂ ಬೇಡ ಅನ್ನುವುದಿಲ್ಲ. ಯಾರು ಅಧಿಕಾರ ಬೇಡವೆನ್ನುತ್ತಾರೆ?.
ಹೀಗೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ನಾನೇನು ಸನ್ಯಾಸಿಯಲ್ಲ. ಅಧಿಕಾರದ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನಮಗಿಂತಲೂ ಹಿರಿಯರಿದ್ದಾರೆ. ಅಂತಹವರು ಮುಗಿಯಲಿ. ಅಂತಹ ಹಿರಿಯರ ಖೋಟಾ ಮುಗಿದ ಮೇಲೆ ನಗೆ ಕೊಡಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸದ್ಯಕ್ಕೆ ನಾನು ಶಾಸಕನಾಗಿದ್ದೇನೆ. ಶಾಸಕನಾಗುವೆಂದರೆ ಸುಮ್ಮನೇ ಅಲ್ಲ. ಆಸೆಗೂ ಇತಿಮಿತಿ ಇದೆ. ಮೊದಲು ಹಿರಿತನಕ್ಕೆ ಗೌರವ ಸಿಗಲಿ. ಆಮೇಲೆ ನಮಗೆ ಅವಕಾಶ ನೀಡಲಿ ಎಂದರು.