ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ವ್ಯವಹಾರಿಕವಾಗಿ ಅನ್ಯ ಭಾಷೆಗಳ ಬಳಕೆ ಇರಲಿ, ಆದರೆ ಮಾತೃಭಾಷೆ ಕನ್ನಡ ಸದಕಾಲ ನಾಲಿಗೆಯ ಮೇಲೆ ನಲಿದಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಹಡೆನಹಳ್ಳಿ ಎಚ್.ಎನ್. ಲೋಕೇಶ್ ಹೇಳಿದರು.ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಾಲುಮರದ ತಿಮ್ಮಕ್ಕ ಅವರಿಗೆ ಸಂತಾಪ ಸೂಚನೆ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ನಾಡಿನ ಸಂಸ್ಕೃತಿ. ಸುಲಲಿತ ಹಾಗೂ ಸ್ಪಷ್ಟ ಭಾಷೆಯಾಗಿದ್ದು ಎಲ್ಲಿಂದ ಯಾರೇ ಬಂದರೂ ಸ್ವಾಗತಿಸುವ ನಾಡು ನಮ್ಮದಾಗಿದೆ. ಇಲ್ಲಿ ಇರುವವರೆಗೂ ಇಲ್ಲಿಯ ಸಂಸ್ಕೃತಿಗೆ ಹೊಂದಿಕೊಂಡು ನಾಡು ನುಡಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಹೋಬಳಿಯ ಹೆಸರಾಂತ ಸಾಹಿತಿಗಳಾದ ಎಸ್ ಎಲ್ ಭೈರಪ್ಪ ಅವರ ಕಾದಂಬರಿಗಳನ್ನು ಓದುವುದರಿಂದ ಸಾಹಿತ್ಯದ ಜ್ಞಾನ ತಿಳಿಯುತ್ತದೆ. ಭೈರಪ್ಪನವರ ಕಾದಂಬರಿಗಳು ರಾಜ್ಯದ ಎಲ್ಲಾ ಗ್ರಂಥಾಲಯಗಳಲ್ಲಿ ಓದುವವರಿಗೆ ಸಿಗುವ ಅವಕಾಶವನ್ನು ಸರ್ಕಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಹೋಬಳಿ ಘಟಕದ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ ಮಾತನಾಡಿ, ಕನ್ನಡ ಒಂದು ಶ್ರೀಮಂತ ಭಾಷೆ, ಪ್ರತಿ ಪದಗಳಲ್ಲಿಯೂ ಸಾಹಿತ್ಯ ಭಾವನೆ ತುಂಬಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಗ್ಲ ಹಾಗೂ ಇತರೆ ಅನ್ಯಭಾಷೆಗಳಿಗೆ ಜೋತುಬಿದ್ದಿರುವ ಕೆಲವರು ಮಾತೃಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಹೆಮ್ಮೆಯ ಭಾಷೆ ನಮ್ಮದು. ದೇಶಪ್ರೇಮದ ಜೊತೆಗೆ ಮಾತೃಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಷ್ಟೇ ಅಲ್ಲ ಕನ್ನಡಿಗರ ಆತ್ಮಗೌರವವಾಗಿದೆ ಎಂದರು.ಕರ್ನಾಟಕ ಜಾನಪದ ಪರಿಷತ್ ಅರಸೀಕೆರೆ ತಾಲೂಕು ಅಧ್ಯಕ್ಷ ಜಿ.ಪರಮೇಶ್ ಮಾತನಾಡಿ, ಪದವಿಗಳನ್ನು ಪಡೆಯುವುದೇ ಶಿಕ್ಷಣವಲ್ಲ. ಸಾಹಿತ್ಯ ಜ್ಞಾನ ಹೊಂದಿರುವ ಎಲ್ಲರೂ ವಿದ್ಯಾವಂತರೇ ಆಗಿರುತ್ತಾರೆ. ಮನಸ್ಸಿನಲ್ಲಿ ಉತ್ತಮ ಭಾವನೆಗಳಿದ್ದರೆ ಸಾಕು ಭಾಷೆ ಹಾಗೂ ಸಾಹಿತ್ಯ ಅಭಿಮಾನ ತಾನಾಗಿಯೇ ರೂಪುಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನೆಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ದೀಪಾ, ಇಸಿಒ ಅನಿಲ್, ನಿವೃತ್ತ ಶಿಕ್ಷಣಾಧಿಕಾರಿ ಎನ್.ಜೆ. ಸೋಮನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಬೊಮ್ಮೇಗೌಡ, ಕಸಾಪ ಉಪಾಧ್ಯಕ್ಷರಾದ ವಿಕ್ಟರ್, ಹೊನ್ನೇಗೌಡ, ಎಚ್.ಪಿ. ಸಂಪತ್ ಕುಮಾರ್, ಮುಖಂಡರುಗಳಾದ ಟಿ. ಆರ್. ಸ್ವಾಮಿ, ಪ್ರಕಾಶ್, ಶಶಿಕಲಾ ಕೆ.ಟಿ. ಆನಂದ್, ಕರಿಯಪ್ಪ ಗೌಡ ರುದ್ರೇಶ್, ಯಲ್ಲಪ್ಪ, ಲೋಕೇಶ್, ಕೆಂಪಯ್ಯ, ಮಂಜೇಗೌಡ, ಅಶೋಕ್, ರೇಖಾ, ಪದಾಧಿಕಾರಿಗಳು, ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))