ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಸಮಗ್ರ ಉಪನಗರ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಜಿಲ್ಲಾಡಳಿತ ನಿಗದಿ ಪಡಿಸುವ ದರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಎಚ್ಚರಿಕೆ ನೀಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ದರ ನಿರ್ಧರಣ ಸಭೆಯಲ್ಲಿ ಎಲ್ಲ ರೈತರು ಪಾಲ್ಗೊಳ್ಳುತ್ತೇವೆ. ಭೂಮಿಯೇ ಕೊಡುವುದಿಲ್ಲ ಎಂದ ಮೇಲೆ ದರ ಒಪ್ಪಿಕೊಳ್ಳುವ ಮಾತೇ ಇಲ್ಲ. ಜಿಲ್ಲಾಡಳಿತ ಬಲವಂತ ಮಾಡಿದರೆ ಕಾನೂನು ಹೋರಾಟದ ಜೊತೆಗೆ ಉಪವಾಸ ಸತ್ಯಾಗ್ರಹ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆಯಂತಹ ಚಳವಳಿಯನ್ನು ತೀವ್ರಗೊಳಿಸುತ್ತೇವೆ ಎಂದರು.
2025ರ ಮಾರ್ಚ್ 12ರಂದು ಬಿಡದಿ ಟೌನ್‌ಶಿಪ್ ಯೋಜನೆಗಾಗಿ 1987ರ ನಗರಾಭಿವೃದ್ಧಿ ಕಾಯ್ದೆ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೀಗ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013ರ ಅನ್ವಯ ಭೂ ಪರಿಹಾರ ನೀಡಲು ಮುಂದಾಗಿದ್ದಾರೆ. ಭೂ ಸ್ವಾಧೀನ ವಿಚಾರದಲ್ಲಿ ಎರಡೆರಡು ಕಾಯ್ದೆಗಳನ್ನುಏಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.2013ರ ಕಾಯ್ದೆ ಪ್ರಕಾರ ವಸ್ತು ಸ್ಥಿತಿ, ಪರಿಸರದ ಮೇಲಾಗುವ ಪರಿಣಾಮ, ಆಹಾರ ಭದ್ರತೆ ಕೊರತೆ, ಜಾನುವಾರುಗಳು, ಕಾರ್ಮಿಕರು, ರೇಷ್ಮೆ ಬೆಳೆಗಾರರಿಗೆ ಏನೆಲ್ಲ ತೊಂದರೆ ಆಗುತ್ತದೆ ಎಂಬುದರ ಅಸೆಸ್ ಮೆಂಟ್ ಮಾಡಬೇಕು. ಆ ಕೆಲಸವನ್ನು ಇಲ್ಲಿವರೆಗೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಟೌನ್‌ಶಿಪ್ ಯೋಜನೆಗಾಗಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿರುವ ಭೂಮಿ ಕೆಂಪು ವಲಯದಲ್ಲಿದೆ. ಹೀಗಾಗಿ ಮಾರುಕಟ್ಟೆ ದರವೂ ಕಡಿಮೆಯಾಗಿದೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲು ಒಂದು ಕಾಯ್ದೆ ಬಳಕೆ ಮಾಡಿದರೆ, ಭೂ ಪರಿಹಾರ ನೀಡಲು ಮತ್ತೊಂದು ಕಾಯ್ದೆ ಬಳಕೆ ಮಾಡಿಕೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.ರಾಜ್ಯಪಾಲರು ಅನುಮೋದನೆ ಮಾಡಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ಬಿಡುಗಡೆ ಮಾಡಿರುವ ಪತ್ರದಲ್ಲಿ ಒಟ್ಟಾರೆ 2,900 ಎಕರೆ ಗೋಮಾಳ ಇದೆ ಎಂದು ಉಲ್ಲೇಖವಾಗಿದೆ. ಆದರೆ, ಅದೇ ಜಿಬಿಎ ತನ್ನ ವೆಬ್‌ಸೈಟ್‌ನಲ್ಲಿ 750 ಸರ್ಕಾರಿ ಗೋಮಾಳ ಇರುವುದಾಗಿ ನಮೂದಾಗಿದೆ. ಕೇವಲ 1 ವರ್ಷ 8 ತಿಂಗಳಲ್ಲಿ 2,150 ಎಕರೆ ಸರ್ಕಾರಿ ಜಮೀನು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಬೈರಮಂಗಲದಿಂದ ಸಾವಿರಾರು ರೈತರು ಪಾದಯಾತ್ರೆಯಲ್ಲಿ ರಾಮನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಪ್ರಾಧಿಕಾರಕ್ಕೆ ಸುಮಾರು 3 ಸಾವಿರ ರೈತರಿಂದ ಆಕ್ಷೇಪಣೆ ಸಲ್ಲಿಕೆಯಾಗಿವೆ. ಈ ಎರಡಕ್ಕೂ ಉತ್ತರ ಬರಬೇಕು. ಜೊತೆಗೆ 2013ರ ಕಾಯ್ದೆ ಪ್ರಕಾರ ಎಲ್ಲ ಪ್ರಕ್ರಿಯೆ ಮುಗಿಸಿದ ತರುವಾಯ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಲಿ ಎಂದು ಹೇಳಿದರು.ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಶೀನಪ್ಪರೆಡ್ಡಿ, ಖಜಾಂಚಿ ನಾಗರಾಜು, ಪದಾಧಿಕಾರಿಗಳಾದ ಕೇಶವರೆಡ್ಡಿ, ರವೀಂದ್ರನಾಥ ರೆಡ್ಡಿ, ಚನ್ನಕೇಶವ, ರಾಧಾಕೃಷ್ಣ, ನಾಗೇಶ್ ಕುಮಾರ್, ಚಂದ್ರು ಅಂಗರಪಾಳ್ಯ, ದೀಪಕ್, ಚಲುವರಾಜು, ರಾಮಚಂದ್ರು, ಗುರುಲಿಂಗಯ್ಯ ಮತ್ತಿತರರು ಇದ್ದರು.
...ಕೋಟ್ ...ಬಿಡದಿ ಟೌನ್ ಶಿಪ್ ಯೋಜನೆಗೆ 9600 ಎಕರೆ ರೈತರ ಜಮೀನು ಭೂಸ್ವಾಧೀನದ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದು, ಫಲವತ್ತಾದ ಭೂಮಿಯಲ್ಲಿ ಸಣ್ಣ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ದರಖಾಸ್ತು ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಿಲ್ಲ. ಹೈನುಗಾರಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜಿಲ್ಲಾಧಿಕಾರಿಗಳು ಭೂ ದರ ನಿಗದಿ ಮಾಡುತ್ತಿರುವ ಬಗ್ಗೆ ಗ್ರಾಮದ ನೀರಿನ ತೊಟ್ಟಿ, ಎಂಪಿಸಿಎಸ್ ಕಟ್ಟಡಗಳ ಮೇಲೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಕರಪತ್ರಗಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ರೈತರ ವಿರೋಧದ ನಡುವೆಯೂ ದರ ನಿಗದಿ ಸಭೆ ಕರೆಯಲಾಗಿದೆ.
- ರಾಮಣ್ಣ, ಅಧ್ಯಕ್ಷರು, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಮಿತಿ....ಕೋಟ್ ...
ಸಿಎಂ, ಡಿಸಿಎಂ, ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಭೂಸ್ವಾಧೀನ ಮಾಡದಂತೆ ಮನವಿ ಮಾಡಲಾಗಿದೆ. ಸೌಜನ್ಯಕ್ಕೂ ರೈತರ ಸಭೆ ನಡೆಸಿಲ್ಲ. ರೈತರ ವಿರೋಧದ ನಡುವೆ ಜಿಲ್ಲಾಧಿಕಾರಿಗಳು ಭೂ ದರ ನಿಗದಿ ಮಾಡಲು ಮುಂದಾಗಿರುವುದು ಎಷ್ಟು ಸರಿ. ಸುಮಾರು 3 ಸಾವಿರ ಎಕರೆ ಇದ್ದ ಸರ್ಕಾರಿ ಜಮೀನು, ಇದೀಗ 750 ಎಕರೆಗೆ ಬಂದಿದೆ. ಅಷ್ಟೂ ಭೂಮಿ ಲಪಟಾಯಿಸುವ ಹುನ್ನಾರ ನಡೆದಿದೆ.- ಶ್ರೀಧರ್, ರೈತ ಹೋರಾಟಗಾರರು.
-5ಕೆಆರ್ ಎಂಎನ್ 1.ಜೆಪಿಜಿ
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.;Resize=(128,128))
;Resize=(128,128))