ಕಾನೂನು ಬದಲಾದರೂ, ಗಾದೆಗಳು ಸುಳ್ಳಾಗದು: ಪುರುಷೋತ್ತಮ್

| Published : Nov 23 2025, 03:15 AM IST

ಸಾರಾಂಶ

ಕಾಲಕಾಲಕ್ಕೆ ಕಾನೂನು ಬದಲಾಗುತ್ತಿರುತ್ತವೆ, ತಿದ್ದುಪಡಿ ಮಾಡಲಾಗುತ್ತದೆ. ಆದರೆ ಹಳ್ಳಿಯಲ್ಲಿ ನಮ್ಮ ಹಿರಿಯರು ಕಟ್ಟಿದ ಗಾದೆ ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಂ. ಪುರುಷೋತ್ತಮ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಾಲಕಾಲಕ್ಕೆ ಕಾನೂನು ಬದಲಾಗುತ್ತಿರುತ್ತವೆ, ತಿದ್ದುಪಡಿ ಮಾಡಲಾಗುತ್ತದೆ. ಆದರೆ ಹಳ್ಳಿಯಲ್ಲಿ ನಮ್ಮ ಹಿರಿಯರು ಕಟ್ಟಿದ ಗಾದೆ ಮಾತುಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಂ. ಪುರುಷೋತ್ತಮ್ ಅಭಿಪ್ರಾಯಪಟ್ಟಿದ್ದಾರೆ.ಅವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ‘ಪೋಕ್ಸೊ ಕಾಯ್ದೆ’ಯ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ನಮ್ಮ ಪೂರ್ವಿಕರು ಯಾವುದೇ ಪಿಎಚ್‌ಡಿ ಪಡೆಯದಿದ್ದರೂ, ಜೀವನದ ಅನುಭವದ ಮೂಲಕ ಕಟ್ಟಿರುವ ಗಾದೆ ಮಾತುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ, ಅದುವೇ ಶಾಶ್ವತ. ಮಕ್ಕಳನ್ನು ದೇವರಂತೆ ಕಾಣು ಎಂದು ಶತಮಾನಗಳ ಹಿಂದೆಯೇ ಹಿರಿಯರು ತಿಳಿಸಿದ್ದರು. ಇಂದು ಮಕ್ಕಳನ್ನು ದೇವರಂತೆ ಕಂಡರೆ ಪೋಕ್ಸೊ ಪ್ರಕರಣಗಳು ದಾಖಲಾಗುವುದು ತಪ್ಪುತ್ತದೆ ಎಂದವರು ನುಡಿದರು.2012ರ ನವೆಂಬರ್ 14ರಂದು ಪೋಕ್ಸೊ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 46 ಸೆಕ್ಷನ್‌ಗಳಿದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ನ್ಯಾಯ ದೊರಕಿಸಲೆಂದು ಈ ಕಾಯ್ದೆ ರೂಪಿಸಲಾಗಿದೆ. ಕೆಲವೊಮ್ಮೆ ಯೌವನದ ಪೇಮಾಂಕುರ ಅಥವಾ ಆಕರ್ಷಣೆಯಿಂದ, ಪರಸ್ಪರ ಒಪ್ಪಿಗೆಯಿಂದ ಒಂದಾಗಿದ್ದರೂ, ಪೋಷಕರ ಒತ್ತಡದಿಂದ ಸುಳ್ಳು ಪೋಕ್ಸೊ ಪ್ರಕರಣಗಳು ದಾಖಲಾದ ನಿದರ್ಶನಗಳಿವೆ. ಆರೋಪ ಸಾಬೀತಾಗಿ ಶಿಕ್ಷೆ ಪ್ರಕಟಗೊಂಡರೇ ಆತನ ಜೀವನವೇ ನಾಶ ಆಗುತ್ತದೆ. ಹೀಗಾಗಿ ಕಾಯ್ದೆಯ ಕುರಿತಾಗಿ ಜಾಗೃತಿ ಅತ್ಯಗತ್ಯ ಎಂದರು. ಇತರ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸುವ ವೇಳೆ ನ್ಯಾಯಾಧೀಶರು ತಮ್ಮ ಪರಮಾಧಿಕಾರವನ್ನು ಬಳಸಲು ಅವಕಾಶವಿದೆ. ಆದರೆ ಪೋಕ್ಸೊ ಕಾಯ್ದೆಯಲ್ಲಿ ನ್ಯಾಯಧೀಶರು ಕನಿಷ್ಠ 10 ವರ್ಷ ಶಿಕ್ಷೆಯನ್ನು ನೀಡಲೇಬೇಕಾಗಿದ್ದು, ಜೀವಾವಧಿ ಶಿಕ್ಷೆಯನ್ನು ನೀಡಲು ಅವಕಾಶವಿದೆ. ಅಲ್ಲದೇ ಆರೋಪಿಯೂ ಕೃತ್ಯವೆಸಗಿದ್ದಾನೆ ಎಂದು ಊಹಿಸಬಹುದಾಗಿದೆ ಎಂದು ಹೇಳಿದರು. ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಪ್ರೊ.ಡಾ.ನಿರ್ಮಲಾ ಕುಮಾರಿ, ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ರಾಘವೇಂದ್ರ ಉಪಸ್ಥಿತರಿದ್ದರು. ಪತ್ರಕರ್ತ ರಕ್ಷಿತ್ ಬೆಳಪು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ನವ್ಯಾ ವಂದಿಸಿದರು. ನಿಶಾ ನಿರೂಪಿಸಿದರು.