ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದ್ದರೂ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ, ಹಳಿಂಗಳಿ, ಆಸ್ಕಿ, ಕುಲಹಳ್ಳಿ ನದಿ ಪಾತ್ರದಲ್ಲಿ ಮಂಗಳವಾರ ಅರ್ಧ ಅಡಿ ನದಿಪಾತ್ರದ ನೀರಿನಮಟ್ಟ ಏರಿಕೆಯಾಗಿದೆ. ಆದರೆ, ಪ್ರವಾಹ ಯಥಾಸ್ಥಿತಿಯಲ್ಲಿದೆ.ಒಳಹರಿವಿನ ಪ್ರಮಾಣ ಕುಸಿತವಾಗಿರುವುದರಿಂದ ಬರುವ ಎರಡು ದಿನಗಳಲ್ಲಿ ಕೃಷ್ಣೆಯ ಅಬ್ಬರ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ ಮಂಗಳವಾರ ಒಳಹರಿವು ೨,೯೬,೨೭೮ ಕ್ಯುಸೆಕ್ ಇದ್ದರೆ, ಹೊರ ಹರಿವು ೨,೯೫,೫೨೮ ಕ್ಯುಸೆಕ್ ಇದೆ. ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ೩ಲಕ್ಷ ಕ್ಯುಸೆಕ್ ಇದ್ದರೆ, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ತಾಲೂಕಿನಲ್ಲಿ ಒಂದು ಮನೆ ಬಿದ್ದಿದ್ದು, ೨೭೩೪ ಹೆಕ್ಟೇರ್ ಕೃಷಿ ಭೂಮಿಯ ಬೆಳೆ ಮತ್ತು ೭.೩೦ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಕಾಳಜಿ ಕೇಂದ್ರಗಳಾದ ಹಳಿಂಗಳಿಯ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ೪೦ ಕುಟುಂಬ ೧೭೫ ಜನ ಮತ್ತು ೨೦೮ ಜಾನುವಾರುಗಳು, ತಮದಡ್ಡಿಯಲ್ಲಿ ೯ ಕುಟುಂಬಗಳ ಪೈಕಿ ೩೦ ಜನರು, ೮೯ ಜಾನುವಾರುಗಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ, ಆಸ್ಕಿಯ ೨೩೫ ಜನರು ೫೦ ಜಾನುವಾರುಗಳೊಡನೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.