ಸಾರಾಂಶ
ಮಹಾರಾಷ್ಟ್ರದ ಕೊಯ್ನಾ ಹಾಗೂ ರಾಧಾನಗರಿ ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಪಂಚ ನದಿಗಳ ಅಬ್ಬರ ಮುಂದುವರಿದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಹಾರಾಷ್ಟ್ರದ ಕೊಯ್ನಾ ಹಾಗೂ ರಾಧಾನಗರಿ ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಪಂಚ ನದಿಗಳ ಅಬ್ಬರ ಮುಂದುವರಿದಿದೆ. ಸೋಮವಾರ ತಾಲೂಕಿನ ನದಿಗಳಿಗೆ 2,92,169 ಕ್ಯುಸೆಕ್ ನೀರು ಹರಿದು ಬರುತ್ತಿದೆ.ದೂಧಗಂಗಾ ನದಿಗೆ 48,570 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್‌ನಿಂದ 2,43,579 ಕ್ಯುಸೆಕ್ ಹೀಗೆ ಒಟ್ಟು 2,92,169 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ.
ಕಲ್ಲೋಳ ಬಳಿ ಕೃಷ್ಣಾ ನದಿಗೆ 2,92,169 ಕ್ಯುಸೆಕ್ ನೀರು ಹರಿದುಬರುತ್ತಿದೆ. ನಿಪ್ಪಾಣಿ ತಾಲೂಕಿನ 1043 ಜನರನ್ನು ಹಾಗೂ ಚಿಕ್ಕೋಡಿ ತಾಲೂಕಿನ ನದಿ ತೀರದ 164 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಎಲ್ಲ ಜನರಿಗೆ ಉಟ,ವಸತಿ ಹಾಗೂ ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ತಿಳಿಸಿದ್ದಾರೆ.ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂದಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಹಾಗೂ ಯಕ್ಸಂಬಾ-ದಾನವಾಡ ಹಾಗೂ ಸದಲಗಾ-ಬೋರಗಾಂವ ಸೇತುವೆ ಜಲಾವೃಗೊಂಡಿದ್ದು, ಬೇಡಕಿಹಾಳ-ಬೋರಗಾಂವ ಮುಂಖಾಂತರ ಮಾತ್ರ ಮಹಾರಾಷ್ಟ್ರಕ್ಕೆ ಸಂಚರಿಸುವ ಮಾರ್ಗ ಬಾಕಿ ಉಳಿದಿವೆ.
ಮಹಾದಲ್ಲಿನ ಮಳೆಯ ಪ್ರಮಾಣ: ಕೊಯ್ನಾ-71, ವಾರಣಾ-70, ಕಾಳಮ್ಮಾವಾಡಿ-65, ಮಹಾಬಳೇಶ್ವರ-93, ನವಜಾ-67, ರಾಧಾನಗರಿ-117, ಕೊಲ್ಲಾಪುರ-15 ಮಿಮಿ ಮಳೆಯಾಗಿರುವ ಕುರಿತು ವರದಿಯಾಗಿದ್ದು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆ ವಿಶ್ರಾಂತಿ ಪಡೆದಿದೆ.